ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಬಿಜೆಪಿ ತಮ್ಮಲ್ಲಿರುವ ಹೊಲಸನ್ನು ಕಾಂಗ್ರೆಸ್ ಮೇಲೆ ಎರಚುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಗುಡುಗಿದರು.
ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಾಂಗ್ರೆಸ್ ಕೂಡ ಬಿಎಸ್ ವೈ ಎಂಜಲು ತಿನ್ನುತ್ತಿದೆ ಎಂಬ ಬಸನಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸನಗೌಡ ತಮ್ಮ ಪಕ್ಷದ ಹೊಲಸನ್ನು ನಮ್ಮ ಮೇಲೆ ಎಸೆಯುತ್ತಿದ್ದಾರೆ. ಬಿಜೆಪಿ ಮುಖಂಡರು ಮೊದಲು ಇಬ್ಬರಲ್ಲಿ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಿ. ಸಿಎಂ ಯಡ್ಯೂರಪ್ಪ ಅವರನ್ನು ಕೆಳಗಿಳಿಸಲಿ ಅಥವಾ ಯತ್ನಾಳರನ್ನು ಉಚ್ಚಾಟನೆ ಮಾಡಲಿ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಯಾರ ಜೊತೆಯೂ ಹೊಂದಾಣಿಕೆ ರಾಜಕಾರಣ ಮಾಡುತ್ತಿಲ್ಲ.
ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಡಿಕೆಶಿ ಜೈಲಿಗೆ ಹೋಗುತ್ತಿರಲಿಲ್ಲ. ನಳೀನ್ ಕುಮಾರ ಕಟೀಲರಿಗೆ ತಾಕತ್ತಿದ್ದರೆ ಇಬ್ಬರಲ್ಲಿ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮುಲು ಪಿಎ ಅರೆಸ್ಟ್ ವಿಚಾರವಾಗಿ ಮಾತನಾಡಿದ ಅವರು, ಇದು ಕಳ್ಳರ ಸಂತೆ, ಯಾರು ದೊಡ್ಡ ಕಳ್ಳ, ಯಾರು ಸಣ್ಣ ಕಳ್ಳ ಎಂಬುದು ಗೊತ್ತಾಗಬೇಕಿದೆ
ಸರ್ಕಾರ ಕೊರೊನದಿಂದ ಮೃತಪಟ್ಟವರ ಬಗ್ಗೆ ತಪ್ಪು ಲೆಕ್ಕ ನೀಡುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಿದ್ಧವಾಗಿದೆ.
ಪೆಟ್ರೋಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧವೂ ಹೋರಾಟ ನಡೆಯಲಿದೆ. ದೇಶಾದ್ಯಂತ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಸೈಕಲ್ ರ‌್ಯಾಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ನಿರಂತರ ನಡೆಯುತ್ತಿದೆ. ಇದರ ವಿರುದ್ಧ ಎಸ್ಪಿ, ಡಿಸಿ ಮೌನವಾಗಿದ್ದಾರೆ. ಜಿಲ್ಲಾ ಮಂತ್ರಿಗಳೂ ಇದರಲ್ಲಿ ಶಾಮೀಲಾಗಿರುವ ಅನುಮಾನ ಇದೆ. ಮಟ್ಕಾ, ಮರಳು ಮಾಫಿಯಾದಲ್ಲಿ ಕನಕಗಿರಿ ಶಾಸಕರೂ ಭಾಗಿಯಾಗಿದ್ದಾರೆ ಎಂಬ ಅನುಮಾನ ಇದೆ. ಇಡೀ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿ ಆಗಿವೆ. ಬಿಜೆಪಿ ಕಾರ್ಯಕರ್ತರು ಅವರಿವರ ಮಾಮೂಲಿ ಫಿಕ್ಸ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.