ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಹುಟ್ಟು ಹಬ್ಬ ಆಚರಣೆ ವೇಳೆ ತಲ್ವಾರ್ ಝಳಪಿಸಿದ ಯುವಕರೀಗ ಪೊಲೀಸರ ಅತಿಥಿಯಾಗಿದ್ದಾರೆ. ತಲ್ವಾರ್ ಹಿಡಿದು, ಡಿ.ಜೆ. ಗೆ ಹೆಜ್ಜೆ ಹಾಕಿದ್ದ ಯುವಕರನ್ನು ರೋಜಾ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಲಬುರ್ಗಿಯ ಮೆಹಬೂಬ ನಗರದಲ್ಲಿ ಈ ಘಟನೆ ನಡೆದಿತ್ತು. ಇಮ್ರಾನ್ ಎಂಬಾತನ ಬರ್ತಡೇ ಸೆಲೆಬ್ರೇಷನ್ ವೇಳೆ ಇಮ್ರಾನ್, ತಬ್ರೇಜ್, ರಶೀದ್, ಅಫ್ರೋಜ್, ತಲ್ಹಾ, ಸೋಹೆಲ್ ಹಾಗೂ ಜಹೀರ್ ರಾಜಾರೋಣವಾಗಿ ತಲ್ವಾರ್ ಝಳಪಿಸಿದ್ದಲ್ಲದೇ, ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿದ್ದರು.
ಕೋವಿಡ್ ನಡುವೆ ಯಾವುದೇ ಪರವಾನಿಗೆ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ್ದರು. ಅಲ್ಲದೇ, ಅನುಮತಿ ಇಲ್ಲದೆಯೇ ಸಾರ್ವಜನಿಕ ಸ್ಥಳದಲ್ಲಿ ವೇದಿಕೆ ನಿರ್ಮಾಣ ಮಾಡಿ, ವೇದಿಕೆ ಮೇಲೆ ತಲ್ವಾರ್ ಹಿಡಿದು ಕುಣಿದು ಕುಪ್ಪಳಿಸಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿ ಅದು ವೈರಲ್ ಆಗಿತ್ತು. ಇದು ಕಲಬುರಗಿ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ತಲ್ವಾರ್ ಹಿಡಿದು ಕುಣಿದ ಏಳು ಯುವಕರನ್ನು ಬಂಧಿಸಿದ್ದಾರೆ. ಕಲಬುರ್ಗಿ ಎ ಡಿವಿಜನ್ ಎಸಿಪಿ ಅಂಶುಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಆರೋಪಿತರನ್ನು, ಸೆಕ್ಷನ್ 107 ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.