
-ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಚಿವ ತಂಗಡಗಿ ಸವಾಲು
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಕತ್ತಿದ್ದರೆ ಸಂಸದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿ ಜೊತೆ ಸೆಲ್ಫಿ ತಗೊಂಡ್ ಬರಲಿ ನೋಡೋಣ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದರು.
ಕೊಪ್ಪಳದ ಚಿಕ್ಕ ಜಂತಕಲ್ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಪಿಎಂ ಜೊತೆ ಸೆಲ್ಫಿ ತೆಗೆದುಕೊಂಡು ಬರಲಿ ತೋರಿಸಲಿ. ಪ್ರತಾಪ್ ಸಿಂಹ ಎಂಥ ಯೋಗ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎರಡು ಬಾರಿ ಸಂಸದರಾದ ಮಾತ್ರಕ್ಕೆ ಪ್ರತಾಪ್ ದೊಡ್ಡವರಾಗುವುದಿಲ್ಲ, ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆ ಪ್ರತಾಪ್ ಸಿಂಹಗಿಲ್ಲ. ಅವನೊಬ್ಬ ವೇಸ್ಟ್ ಬಾಡಿ ಎಂದು ಹರಿಹಾಯ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಹೀಮ್ ಎಂದಿರುವ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯನವರಿಗೆ ಸಮವೇ? ಎಂದು ಪ್ರಶ್ನಿಸಿದ ಅವರು, ಹಿಜಾಬ್ ಧರಿಸಿ ಶಾಲೆಗೆ ಬಾರದಂತೆ ರಾಜ್ಯ ಸರ್ಕಾರ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಇಂಥ ವಿಚಾರದಲ್ಲಿ ಚರ್ಚೆ ಮಾಡ್ತಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರಿ ಶಾಲೆಗೆ ಸೂಕ್ತ ಕಟ್ಟಡ ಇಲ್ಲ, ಸಾಕಷ್ಟು ಕಡೆ ಶಿಕ್ಷಕರಿಲ್ಲ. ಹೀಗಿರುವಾಗ ಹಿಜಾಬ್, ಶಾಲು ಅಂತಾ ಚರ್ಚೆ ಮಾಡಿದರೆ ಇವರಿಗೆ ಬೇರೆ ಕೆಲಸ ಇಲ್ಲ ಅಂಥಾನೇ ಅರ್ಥ. ಜನರ ದಾರಿ ತಪ್ಪಿಸುವುದೇ ಬಿಜೆಪಿ ಕೆಲಸ. ಸಮವಸ್ತ್ರದ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ.
ಮಕ್ಕಳಲ್ಲೂ ವಿಷ ಬೀಜ ಬಿತ್ತಿದರೆ ಪರಿಸ್ಥಿತಿ ಎಲ್ಲಿಗೆ ಬಂತು? ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜಾತಿ, ಧರ್ಮ ಬಿಟ್ಟು ಒಗ್ಗಟ್ಟಾಗಿದ್ದೇವೆ. ಶಾಲೆಯಲ್ಲಿ ಧರ್ಮದ ವಿಷ ಬೀಜ ಬಿತ್ತುವ ಮಟ್ಟಕ್ಕೆ ಬಿಜೆಪಿ ಇದೆ. ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಲು ಹೀಗೆ ಮಾಡ್ತಿದೆ. ವೋಟ್ ಬ್ಯಾಂಕ್‌ಗಾಗಿ ಬಿಜೆಪಿ ಹಿಜಾಬ್ ಎಳೆದು ತಂದಿದೆ ಎಂದು ಅವರು ಆರೋಪಿಸಿದರು.