ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಉತ್ತರ ಕರ್ನಾಟಕದ ಭಜಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಾಮಾನ್ಯ. ಆದರೆ, ಈ ಭಜಿಯೇ ತಾಯಿ ಮತ್ತು ಮಗನ ಜೀವಕ್ಕೆ ಕುತ್ತು ತಂದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುದಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹುದಲಿ ಗ್ರಾಮದ ಪಾರ್ವತಿ ಮಾರುತಿ ಮಳಗಲಿ (58) ಮತ್ತು ಮಗ ಸೋಮನಿಂಗ ಮಾರುತಿ ಮಳಗಲಿ (28) ಮೃತ ದುರ್ದೈವಿಗಳು.
ಏನಾಯಿತು: ಹೊಲಕ್ಕೆ ಹೋಗಿದ್ದ ತಾಯಿ ಮತ್ತು ಮಗ ಕೆಲಸ ಮುಗಿಸಿ ಸಂಜೆ ಮನೆಗೆ ಮರಳಿ ಭಜಿ ಮಾಡಿ ಇಬ್ಬರೂ ಸೇರಿ ತಿಂದಿದ್ದಾರೆ. ಕೆಲ ಸಮಯದ ನಂತರ ಇಬ್ಬರಿಗೂ ವಾಂತಿ ಭೇದಿ ಶುರುವಾಗಿದೆ.
ಸ್ಥಳೀಯ ವೈದ್ಯರ ಬಳಿಗೆ ತೋರಿಸಿದ್ದು, ವೈದ್ಯರು ಫುಡ್ ಫಾಯಿಸನ್ ಔಷಧಿ ಕೊಟ್ಟಿದ್ದಾರೆ. ಔಷಧಿ ತೆಗೆದುಕೊಂಡರೂ ವಾಂತಿ ಭೇದಿ ಕಡಿಮೆಯಾಗದೇ ತೀವ್ರ ಅಸ್ವಸ್ಥಗೊಂಡಿದ್ದರಿಂದ ಇಬ್ಬರನ್ನೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ದಾರಿ ಮಧ್ಯದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು. ಫುಡ್ ಫಾಯಿಸನ್ ನಿಂದ ಸಾವು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸತ್ಯ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.