ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯವರೇ ಆಗಿರುವ ಹಾಗೂ ತೆಲಂಗಾಣ ರಾಜ್ಯದ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಜ್ಜನರ್ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಸುಮಾರು ರೂ. 40 ಲಕ್ಷ ಮೌಲ್ಯದ ವೈದ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ವೈದ್ಯಕೀಯ ನೆರವು ನೀಡಿ ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.
ಸಜ್ಜನರ್ ಅವರು, 22 ಆಕ್ಸಿಜನ್ ಕಾನ್ಸನ್ ಟ್ರೇಟರ್, 84 ಆಕ್ಸಿಜನ್ ಸಿಲಿಂಡರ್, 2 ಸಾವಿರ ಕೋವಿಡ್ ಕಿಟ್, 20 ಸಾವಿರ ಮಾಸ್ಕ್, 200 ಲೀಟರ್ ಸ್ಯಾನಿಟೈಸರ್, 1 ಸಾವಿರ ಫೇಸ್ ಶೀಲ್ಡ್, 24 ಯುನಿಟ್ ರೆಮ್ ಡಿಸಿವಿರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿದ್ದಾರೆ.

ವಿಶ್ವನಾಥ್ ಸಜ್ಜನರ್ ಅವರನ್ನು ಎನ್ ಕೌಂಟರ್ ಸ್ಪೇಷಲಿಸ್ಟ್ ಎಂದೇ ಕರೆಯುತ್ತಾರೆ. ಇವರು ಎಲ್ಲ ಐಪಿಎಸ್ ಅಧಿಕಾರಿಗಳಂತೆ ಕೇವಲ ತಾವು ಕರ್ತವ್ಯ ನಿರ್ವಹಿಸಿದ ಕ್ಷೇತ್ರಗಳಲ್ಲಿ ಮಾತ್ರ ಚಿರಪರಿಚತರಾಗಿದ್ದವರು ಅಲ್ಲ. ಇವರು ಭ್ರಷ್ಟರಿಗೆ, ಅನ್ಯಾಕೋರರಿಗೆ ಹಾಗೂ ಅತ್ಯಾಚಾರಿಗಳಿಗೆ ಸಿಂಹ ಸ್ವಪ್ನ, ಖಡಕ್ ಐಪಿಎಸ್ ಆಫೀಸರ್. ಹೀಗಾಗಿಯೇ ಇವರು ಇಡೀ ಭಾರತದ ಜನರಿಗೆ ಚಿರಪರಿಚಿತ.
ಸೇವೆಯಷ್ಟೇ ಮಾನವೀಯ ಮೌಲ್ಯ ಹೊಂದಿರುವ ಇವರು, ಸದ್ಯ ತಮ್ಮ ತಾಯ್ನಾಡಿನ ಜನರು ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವುದಕ್ಕೆ ಮಮ್ಮಲ ಮರುಗಿ ಸಹಾಯ ಮಾಡಿದ್ದಾರೆ.
ವಿಶ್ವನಾಥ್ ಸಜ್ಜನರ್ ಅವರು, ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಪಶುವೈದ್ಯೆ ದಿಶಾ ಅತ್ಯಾಚಾರ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿಯೇ ಬೇಧಿಸಿ, ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಇಡೀ ದೇಶದ ಜನರ ಮನಸ್ಸಿನಲ್ಲಿ ಇಂದಿಗೂ ಹೀರೋ ಆಗಿಯೇ ಉಳಿದುಕೊಂಡವರು.
ಆರೋಪಿಗಳು ಪಶು ವೈದ್ಯೆ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆ ಯುವತಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದಕ್ಕೆ ಇಡೀ ರಾಷ್ಟ್ರವೇ ಆಕ್ರೋಶ ವ್ಯಕ್ತಪಡಿಸಿತ್ತು. ಆಗ ಈ ಪ್ರಕರಣದ ತನಿಖೆಯ ಹೊಣೆಯನ್ನು ನಮ್ಮ ಹೆಮ್ಮೆಯ ಕನ್ನಡಿಗ ಹಾಗೂ ಗದಗ ಜಿಲ್ಲೆಯ ಮಣ್ಣಿನಲ್ಲಿ ಹುಟ್ಟಿದ ವಿಶ್ವನಾಥ್ ಸಜ್ಜನರ್ ಅವರಿಗೆ ವಹಿಸಲಾಗಿತ್ತು.
ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಚೆರ್ಲಪಲ್ಲಿ ಜೈಲಿಗೆ ಕಳುಹಿಸಿದ್ದರು. ಆ ನಂತರ ಆರೋಪಿಗಳನ್ನು ದುಷ್ಕೃತ್ಯ ನಡೆಸಿದ್ದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆರೋಪಿಗಳು ಕಲ್ಲುಗಳನ್ನು ಪೊಲೀಸರತ್ತ ಎಸೆಯಲು ಪ್ರಾರಂಭಿಸಿದ್ದಲ್ಲದೆ, ಗಂಡು ಹಾರಿಸಲು ಪ್ರಾರಂಭಿಸಿದ್ದರು. ಆರೋಪಿಗಳಿಗೆ ಧೈರ್ಯದಿಂದ ಗುಂಡು ಹಾರಿಸಿ ಅತ್ಯಾಚಾರಿಗಳ ಸಂಹಾರ ಮಾಡಿದ್ದು, ಇವರೆ. ಈ ಪ್ರಕರಣದಿಂದಾಗಿ ಸಜ್ಜನರ್ ಅವರನ್ನು ಇಡೀ ರಾಷ್ಟ್ರದ ಮಹಿಳೆಯರು ಅಭಿನಂದಿಸಿ, ಆನಂದ ಭಾಷ್ಪ ಸುರಿಸಿದ್ದರು. ಸದ್ಯ ಈ ಖಡಕ್ ಆಫೀಸರ್, ತಾವು ಹುಟ್ಟಿ- ಬೆಳೆದ, ತಮ್ಮ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.
ಈ ವೈದ್ಯಕೀಯ ಸಾಮಾಗ್ರಿಗಳನ್ನು ಐಪಿಎಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ಸಹೋದರ, ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಡಾ. ಎಂ.ಸಿ. ಸಜ್ಜನರ ಅವರು ಜಿಲ್ಲಾಡಳಿತದ ಭವನದ ಆವರಣದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿ.ಇ.ಓ ಭರತ್, ಡಿ.ಎಚ್.ಓ ಸತೀಶ್ ಬಸರಿಗಿಡದ್ ಸೇರಿದಂತೆ ಹಲವರು ಇದ್ದರು.