ವಿಜಯಸಾಕ್ಷಿ ಸುದ್ದಿ, ನಾಗಪಟ್ಟಿಣಂ
ಕರಾವಳಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಚೌಖ್ತೆ ಚಂಡಮಾರುತದ ಹಾವಳಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ನಾಗಪಟ್ಟಿಣಂ ಜಿಲ್ಲೆಯ 7 ಜನ ಸೇರಿದಂತೆ 9 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ.
ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮರಳಿ ಬರುವ ಸಮಯಕ್ಕೆ ಚಂಡಮಾರುತದ ಗಾಳಿಯ ರಭಸಕ್ಕೆ ಸಿಲುಕಿ ದೋಣಿ ಮಗುಚಿಬಿದ್ದು ಸಮುದ್ರ ಪಾಲಾಗಿದ್ದಾರೆ ಎನ್ನಲಾಗಿದೆ.
ತೌಖ್ತೆ ಚಂಡಮಾರುತದಿಂದಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಕೂಡಲೇ ಮೀನುಗಾರರು ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ದೋಣಿ ಮಗುಚಿಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ನಾಪತ್ತೆಯಾದವರ ರಕ್ಷಣೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಮಂತಪೆಟ್ಟೈಯ ಮೀನುಗಾರರ ಪ್ರತಿನಿಧಿ ಇ ವಿಜಯನ್ ತಿಳಿಸಿದ್ದಾರೆ. ದೋಣಿ ಕೊಚ್ಚಿನ್ ಮೀನುಗಾರಿಕೆ ಬಂದರಿನಿಂದ ಕಳೆದ ಏ. 29ರಂದು ಹೊರಟಿತ್ತು. ತಂಡದಲ್ಲಿ, ಐ ಮಣಿಕಂದನ್ (25), ಅವರ ಸಹೋದರ ಮಣಿವೆಲ್ (23), ಮತ್ತು ಅವರ ತಂದೆ ಎಡುಂಬನ್ ಇದ್ದು (55) ಎಲ್ಲರೂ ಸಮಂತಂಪೆಟ್ಟೈ ಮೂಲದವರಾಗಿದ್ದಾರೆ. ಅಲ್ಲದೇ, ನಾಗೋರ್‌ನ ಬಿ ದಿನೇಶ್ (33), ಮೂವಲೂರಿನ ಸಿ ಎಲಾಂಚೆಜಿಯಾನ್ (26), ಅಕ್ಕರೈಪೆಟ್ಟೆಯ ಕೆ ಪ್ರವೀಣ್ (35), ವನಗಿರಿ ಮೂಲದ ಮೂರ್ತಿ (30) ಇದ್ದರು. ಕಡಲೂರು ಜಿಲ್ಲೆಯ ಕಿಲ್ಲೈನ ಸಿ ಮುರುಗನ್ (40) ಸೇರಿದಂತೆ ಇನ್ನಿಬ್ಬರು ಮೀನುಗಾರರು ಇದ್ದರು ಎಂದು ತಿಳಿದು ಬಂದಿದೆ.