ವಿಜಯಸಾಕ್ಷಿ ಸುದ್ದಿ, ಬೆಳಗಾವಿ
- ನಗರದ ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ…. ಟ್ರ್ಯಾಕ್ಟರ್ ನಲ್ಲಿ ತ್ಯಾಜ್ಯ ತುಂಬಿಕೊಂಡು ಸುರಿದ ಪಾಟೀಲ್
ನಗರದ ಸ್ವಚ್ಛತೆ ಸರಿಯಾಗಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಂಬಲಿಗರೊಂದಿಗೆ ಸ್ವತಃ ತ್ಯಾಜ್ಯ ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಪಾಲಿಕೆ ಆಯುಕ್ತರ ಮನೆ ಮುಂದೆ ಚೆಲ್ಲಿದ್ದಾರೆ.
ಇಂದು ಬೆಳಗ್ಗೆಯೇ ಬೆಂಬಲಿಗರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡ ಅಭಯ ಪಾಟೀಲ, ಕಸ ತುಂಬಿಕೊಂಡು ಟ್ರ್ಯಾಕ್ಟರ್ ನಲ್ಲಿ ತುಂಬಿ ನೇರವಾಗಿ ತಾವೇ ಟ್ರ್ಟಾಕ್ಟರ್ ಚಲಾಯಿಸಿಕೊಂಡು ವಿಶ್ವೇಶ್ವರ ನಗರದಲ್ಲಿರುವ ಪಾಲಿಕೆ ಆಯುಕ್ತರ ಮನೆ ಮುಂದೆ ತಂದು ಚೆಲ್ಲಿದ್ದಾರೆ.
ಕಳೆದ ಹಲವಾರು ತಿಂಗಳಿನಿಂದ ಎಚ್ಚರಿಕೆ ನೀಡುತ್ತ ಬಂದಿದ್ದೇನೆ. ಸ್ವಚ್ಛ ಮಾಡದಿದ್ದರೆ ನಿಮ್ಮ ಮನೆಯ ಮುಂದೆ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದ್ದೆ. ಆದರೆ ಎಚ್ಚರಿಕೆಗೂ ಕ್ಯಾರೇ ಎನ್ನದ್ದರಿಂದ ಅವರ ಮನೆ ಮುಂದೆ ತಂದು ಹಾಕಿದ್ದೇನೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿ ರವಿವಾರ ಇಲ್ಲೇ ತಂದು ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು.