ವಿಜಯಸಾಕ್ಷಿ ಸುದ್ದಿ, ಗದಗ:
ಕಾಂಗ್ರೆಸ್ ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ಹದಿನಾಲ್ಕು ವರ್ಷಗಳ ಬಳಿಕ ಬಿಜೆಪಿಗೆ ಧಕ್ಕಿದ್ದು, ಕಮಲ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.
ಸೋಮವಾರ ನಡೆದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯ ಉಷಾ ಮಹೇಶ ದಾಸರ ನಗರಸಭೆಯ 60ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುನಂದಾ ಪ್ರಕಾರ ಬಾಕಳೆ ಅವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪರವಾಗಿ 19 ಮತಗಳು ಬಿದ್ದಿವೆ ಎಂದು ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ಅಧಿಕೃತವಾಗಿ ಘೋಷಿಸಿದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರಸಭೆ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಹೀಗಾಗಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ಮಹೇಶ ದಾಸರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಪ್ರಕಾಶ ಬಾಕಳೆ ನಾಮಪತ್ರ ಸಲ್ಲಿಸಿದ್ದರು.
ಅದರಂತೆ, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ಉಮೇದುವಾರಿಕೆ ಸಲ್ಲಿಸಿದ್ದರು.

ಇನ್ನು ಉಷಾ ದಾಸರ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನಗರಸಭೆ ಅಧ್ಯಕ್ಷರಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದಿಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿರುವ ಚೆನ್ನದಾಸರ ಸಮುದಾಯದಲ್ಲೇ ನಗರಸಭೆಗೆ ಆಯ್ಕೆಯಾದ ಏಕೈಕ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಹೊರಹೊಮ್ಮಿದ್ದಾರೆ.
ನಗರಸಭೆ ಅಧಿಕಾರ ಅಷ್ಟು ಸುಲಭವಾಗಿ ಬಿಟ್ಟು ಕೊಡಲು ಸಿದ್ಧವಿರದ ಕಾಂಗ್ರೆಸ್ ಹೊರಗಿನ ನಾಲ್ವರನ್ನು ಕರೆತಂದಿತ್ತು. ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೊಂದಲವಿದೆ. ಪಾರದರ್ಶಕ ಚುನಾವಣೆ ನಡೆಸಿಲ್ಲ. ಅಭ್ಯರ್ಥಿಗಳ ಪರವಾಗಿ ಸಹಿ ಆಗಿದ್ದನ್ನು ಸಂಸದರ ಜೊತೆ ಸೇರಿಕೊಂಡು ಎಣಿಕೆ ಮಾಡಿದಾಗ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಚಂದಾವರಿಗೆ 19, ಉಷಾ ದಾಸರರವರಿಗೆ 18 ಮತಗಳು ಬಿದ್ದಿವೆ. ಹೀಗಾಗಿ ಚಂದಾವರಿ ಅವರನ್ನು ಚುನಾಯಿತರೆಂದು ಘೊಷಣೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಆದರೆ, ಅಧಿಕಾರಿಗಳು
ಇಲ್ಲ ಇದು ತಪ್ಪಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಮರು ಚುನಾವಣೆ ಮಾಡಬೇಕು. ಅಲ್ಲದೇ, ಈ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು