ವಿಜಯಸಾಕ್ಷಿ ಸುದ್ದಿ, ಗದಗ:
ಶಿರಹಟ್ಟಿ ಜ.ಫಕ್ಕೀರೇಶ್ವರ ಸ್ವಾಮಿಯ ಮರಿದೇವರು,ಪವಾಡ ಪುರುಷ ಎಂದೇ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ಮಾಗಡಿ ಗ್ರಾಮದ 55 ವರ್ಷದ ಫಕ್ಕೀರಸ್ವಾಮಿ ಎತ್ತಿನಮಠ ಎಂಬುವವರು ಶುಕ್ರವಾರ ಮೃತಪಟ್ಟಿದ್ದಾರೆ.
ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಡಿನ ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿಯ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾಗಿರುವುದು ಉಭಯ ಮಠಗಳ ಭಕ್ತರಲ್ಲಿ ಸಂಚಲನ ಮೂಡಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಿರಹಟ್ಟಿ ಮಠದ ಪೀಠಾಧ್ಯಕ್ಷರಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಮೃತ ಫಕ್ಕೀರಸ್ವಾಮಿ ಎತ್ತಿನಮಠ ಮನನೊಂದಿದ್ದರಂತೆ. ಶುಕ್ರವಾರ ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಫಕ್ಕೀರಸ್ವಾಮಿ ಅವರು ಶಿರಹಟ್ಟಿ ಮಠದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
1988ರಲ್ಲಿ ಸದ್ಯ 13ನೇ ಪಟ್ಟಾಧ್ಯಕ್ಷರಾಗಿರುವ ಜ.ಫಕ್ಕೀರ ಸಿದ್ಧರಾಮ ಶ್ರೀಗಳು ಪಟ್ಟಾಧ್ಯಕ್ಷರಾಗುವ ವೇಳೆಯೇ ಫಕ್ಕೀರಸ್ವಾಮಿ ಎತ್ತಿನಮಠ ಅವರು ತಾವು ಶಿರಹಟ್ಟಿ ಮಠದ ಪಟ್ಟಾಧ್ಯಕ್ಷರಾಗಬೇಕೆಂದು ಪೈಪೋಟಿ ನಡೆಸಿದ್ದರಂತೆ. ಹೀಗಾಗಿ ಅಂದು ಶಿರಹಟ್ಟಿ ಮಠಕ್ಕೆ ಪಟ್ಟಾಭಿಷೇಕ ಮಾಡಬೇಕೆಂಬ ವಿಚಾರಕ್ಕೆ ಗಲಾಟೆ ನಡೆದಿತ್ತಂತೆ. ಆದರೆ, ಭಕ್ತರು ಫಕ್ಕೀರಸ್ವಾಮಿ ಎತ್ತಿನಮಠ ಅವರನ್ನು ಪಟ್ಟಾಧ್ಯಕ್ಷರನ್ನಾಗಿಸಲು ಪರಿಗಣಿಸಲಿಲ್ಲವಂತೆ. ಹೀಗಾಗಿ ಇವರನ್ನು ಮಠದ ಭಕ್ತರೆಲ್ಲರೂ ಫಕ್ಕೀರಸ್ವಾಮಿ ಮರಿದೇವರು ಅಂತಲೇ ಕರೆಯುತ್ತಿದ್ದರು. ಅಲ್ಲದೇ, ಹಳ್ಳಿ ಮೇಲೆ ಭಿಕ್ಷಾಟನೆ ಹೋಗುತ್ತಿದ್ದ ಇವರಿಗೆ ಭಕ್ತ ಸಮೂಹವಿತ್ತಂತೆ.
ಶಿರಹಟ್ಟಿ ಮಠದ ಪೀಠಾಧ್ಯಕ್ಷರಾಗದಿದ್ದರೂ, ಮಾಗಡಿ ಗ್ರಾಮದಲ್ಲಿರುವ ಜ.ಫಕ್ಕೀರಸ್ವಾಮಿ ಶಾಖಾ ಮಠದಲ್ಲಿ ಇರುತ್ತಿದ್ದರು. ಮಾಗಡಿಯಲ್ಲಿದ್ದುಕೊಂಡರೂ ಆಗಾಗ ಶಿರಹಟ್ಟಿ ಮಠಕ್ಕೆ ಭೇಟಿ ನೀಡುತ್ತಿದ್ದರರು. ಮಠಕ್ಕೆಲ್ಲಾ ಬಂದಾಗಲೆಲ್ಲಾ ಮೈಮೇಲೆ ಹಾವು, ಚೇಳು ಬಿಟ್ಟುಕೊಂಡು ಅಡ್ಡಾಡುವುದು, ಭಕ್ತರಿಗೆಲ್ಲಾ ಕಲ್ಲಸಕ್ಕರೆ ಕೊಡುವುದು, ನಾನೇ ಮುಂದಿನ ಪೀಠಾಧ್ಯಕ್ಷನಾಗುತ್ತೇನೆ ಎಂದು ಫಕ್ಕೀರಸ್ವಾಮಿ ಅವರು ಹೇಳಿಕೊಂಡು ಬಂದಿದ್ದರು. ಶ್ರೀಮಠದಲ್ಲಿ ದಿಢೀರನೇ ಇಂತಹ ಬೆಳವಣಿಗೆಯಾಗಿರುವುದನ್ನು ಕಂಡು ಮಾನಸಿಕವಾಗಿ ನೊಂದಿದ್ದಕ್ಕೆ ಹೀಗಾಗಿದೆ ಎಂದು ಭಕ್ತರು ಹೇಳುತ್ತಿದ್ದಾರೆ.
ಈ ಕುರಿತು ‘ವಿಜಯಸಾಕ್ಷಿಗೆ ಪ್ರತಿಕ್ರಿಯಿಸಿದ ಮಾಗಡಿ ಗ್ರಾಮದ ಕೆಲ ಗ್ರಾಮಸ್ಥರು ‘ಫಕ್ಕೀರಸ್ವಾಮಿ ಎತ್ತಿನಮಠ ಅವರು ನಿಧನ ಹೊಂದಿರುವುದು ದುಃಖವನ್ನುಂಟು ಮಾಡಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿಯ ಜ.ಫಕ್ಕೀರೇಶ್ವರ ಮಠದ ಪಟ್ಟಾಧ್ಯಕ್ಷರಾಗಬೇಕೆಂಬ ಕನಸು ಕಂಡಿದ್ದರು. ಅಲ್ಲದೇ, ಅವರು ಕುಟುಂಬದವರೂ ಅವರನ್ನು ಮರಿಸ್ವಾಮಿ ಅಂತಾ ಮಠಕ್ಕೆ ಬಿಟ್ಟಿದ್ದರು. ಈ ಹಿಂದೆ ಪೀಠಾಧ್ಯಕ್ಷಕ್ಕಾಗಿ ಪೈಪೋಟಿ ನಡೆದಿತ್ತು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಪಟ್ಟಾಧ್ಯಕ್ಷ ಕೈತಪ್ಪಿತ್ತು ಎಂದು ಫಕ್ಕೀರಸ್ವಾಮಿ ಎತ್ತಿನಮಠ ಅವರ ನಿಧನಕ್ಕೆ ಸಂತಾಪ ಸೂಚಿಸಿ ಬೇಸರ ವ್ಯಕ್ತಪಡಿಸಿದರು.
ಶಿರಹಟ್ಟಿ ಮಠಕ್ಕೆ ಏಕಾಏಕಿ ಉತ್ತರಾಧಿಕಾರಿ ನೇಮಕ ಮಾಡಿರುವುದು ಖಂಡನೀಯ. ಉತ್ತರಾಧಿಕಾರಿ ನೇಮಕ ಮಾಡುವಷ್ಟು ಅವಸರವೇನಿತ್ತು. ದೇಶ, ವಿದೇಶದಲ್ಲಿ ಶ್ರೀಮಠದ ಭಕ್ತರಿದ್ದು, ಅವಕಾಶ ಕೊಡಬೇಕಿತ್ತು. ಇಷ್ಟು ಅವಸರವಸರವಾಗಿ ಮಾಡುವುದು ಏನಿತ್ತು?. ಉತ್ತರಾಧಿಕಾರಿ ನೇಮಕ ಸಂಶಯಕ್ಕೆ ಕಾರಣವಾಗಿದೆ.
ಸಂತೋಷ ಕುರಿ, ಮಾಜಿ ಉಪಾಧ್ಯಕ್ಷ ಪಪಂ