ವಿಜಯಸಾಕ್ಷಿ ಸುದ್ದಿ, ನವದೆಹಲಿ
ದೆಹಲಿಯಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಉಚಿತ ಪಡಿತರ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರೂ. 5 ಸಾವಿರ ನಗದು ಸಹಾಯ ಧನ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಸದ್ಯ ದೆಹಲಿಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೆ ತರಲಾಗಿದೆ. ಅಲ್ಲದೇ, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಜನರ ನೆರವಿಗೆ ಧಾವಿಸಿದೆ. ದೆಹಲಿಯಲ್ಲಿ 72 ಲಕ್ಷ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ರೇಷನ್ ವಿತರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಅಲ್ಲದೇ, ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ರೂ. 5 ಸಾವಿರ ಆರ್ಥಿಕ ಸಹಾಯ ದೊರೆಯುತ್ತಿದೆ. ಈ ಸಹಾಯ ಸುಮಾರು 1.5 ಲಕ್ಷ ಜನರಿಗೆ ಸಿಗಲಿದೆ. ಹಿಂದಿನ ವಾರವೂ ದೆಹಲಿ ಸರ್ಕಾರ ಕಾರ್ಮಿಕ ವರ್ಗಕ್ಕೆ ನೆರವು ನೀಡಿದ್ದರು.
ಈ ವಿಷಯವಾಗಿ ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಬಡವರಿಗೆ ಎರಡು ತಿಂಗಳ ಪಡಿತರ ನೀಡುತ್ತಿರುವುದರಿಂದ ಅಷ್ಟು ದಿನ ಲಾಕ್ ಡೌನ್ ಮಾಡುತ್ತೇವೆ ಎಂದಲ್ಲ. ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ಸಡಿಲಿಕೆ ಮಾಡುತ್ತೇವೆ. ಸದ್ಯದಲ್ಲಿಯೇ ಲಾಕ್ ಡೌನ್ ತೆರವುಗೊಳ್ಳಲಿದೆ. ಕೊರೊನಾ ವಿಷಯದಲ್ಲಿ ದೆಹಲಿ ಸಂಕಷ್ಟದಲ್ಲಿದೆ. ಆರ್ಥಿಕವಾಗಿ ಸದೃಢರಾಗಿರುವ ಸಶಕ್ತರು ಸಹಾಯಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.