ವಿಜಯಸಾಕ್ಷಿ ಸುದ್ದಿ, ನವದೆಹಲಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ದೇಶದ 9.75 ಕೋಟಿ ರೈತರಿಗೆ 19.5 ಸಾವಿರ ಕೋಟಿ ರೂಪಾಯಿ ನೇರ ನಗದು ವರ್ಗಾವಣೆ ಮೂಲಕ ಹಣ ಪಾವತಿಗೆ ಇಂದು ವರ್ಚುವಲ್ ಸಭೆಯ ಮೂಲಕ ಚಾಲನೆ ನೀಡಿದರು.
ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ಆರು ಸಾವಿರ ಕೋಟಿ ರೂಪಾಯಿ ರೈತರ ಖಾತೆಗೆ ಪಾವತಿ ಮಾಡಲಾಗುತ್ತದೆ. ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಪಾವತಿಸುವ ಈ ಯೋಜನೆಯನ್ನು 2019ರ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಈವರೆಗೂ ಯೋಜನೆಯಡಿ 1.57 ಲಕ್ಷ ಕೋಟಿ ರೂಪಾಯಿ ರೈತರಿಗೆ ಪಾವತಿಸಲಾಗಿದೆ.
ಪ್ರಧಾನಮಂತ್ರಿ ಸಮ್ಮುಖದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಈವರೆಗೂ ಒಂಬತ್ತು ಕಂತುಗಳಲ್ಲಿ 11 ಕೋಟಿ ರೈತರಿಗೆ 1.37 ಲಕ್ಷ ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿದೆ. ಕಿಸಾನ್ ಸನ್ಮಾನ್ ನಿಧಿಯ 2.28 ಕೋಟಿ ಫಲಾನುಭವಿಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಸಂಪರ್ಕಿಸಲಾಗಿದೆ. ಈವರೆಗೂ 2.32 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಕೋವಿಡ್ ಸಂಕಷ್ಟ ಸಮಯದಲ್ಲೂ ರೈತರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ಮುಂದಿನ ಬಾರಿ ಬಂಪರ್ ಬೆಲೆ ಬರುವ ನಿರೀಕ್ಷೆ ಇದೆ ಎಂದು ತೋಮರ್ ಹೇಳಿದರು.
ದೇಶದಲ್ಲಿ ಅಡುಗೆ ಎಣ್ಣೆ ಮತ್ತು ದ್ವಿದಳ ಧಾನ್ಯಗಳ ಕೊರತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಅದರ ಕುರಿತಂತೆ ಗಮನ ಹರಿಸಿ ಹೆಚ್ಚಿನ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದರು.
ಕೃಷಿ ಇಲಾಖೆಯ ರಾಜ್ಯ ಸಚಿವರಾದ ಕೈಲಾಶ್ ಚೌದರಿ, ಶೋಭಾ ಕರಂದ್ಲಾಜೆ, ಕೃಷಿ ಇಲಾಖೆ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.