ವಿಜಯಸಾಕ್ಷಿ ಸುದ್ದಿ, ಗದಗ
ಮೈಮೇಲೆ ದೇವರು ಬರುತ್ತದೆ ಕೈ ನೋವು ವಾಸಿ ಮಾಡುವುದಾಗಿ ನಂಬಿಸಿ ವಂಚನೆ ಮಾಡಿದ ಹಾಗೂ ಧರ್ಮನಿಂದನೆ ಮಾಡಿದ್ದಾನೆಂದು ಆರೋಪಿಸಿ ಡೋಂಗಿ ಬಾಬಾನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ, ಬಾಬಾನ ಪತ್ನಿ ಗದಗ ಗ್ರಾಮೀಣ ಠಾಣೆಯಲ್ಲಿ ಐವರ ವಿರುದ್ದ ದೂರು ದಾಖಲಿಸಿದ್ದಾರೆ.

ಕಳೆದ ಜು.12ರಂದು ಗದಗ ಎಸ್.ಎಂ.ಕೃಷ್ಣ ನಗರ ಕಾಲೊನಿ ನಿವಾಸಿ ಆಸೀಫ್ ಜಾಗಿರದಾರ ಎಂಬಾತ ತನ್ನ ಮೈಮೇಲೆ ದೇವರು ಬರುತ್ತದೆ. ನಿಮ್ಮ ಕೈ ನೋವು ವಾಸಿ ಮಾಡುವುದಾಗಿ ನಂಬಿಸಿ ಗದಗ ನಗರದ ಈರಣ್ಣ ನಿಂಗಪ್ಪ ಮುರ್ಲಾಪೂರ ಅವರಿಂದ 40 ಸಾವಿರ ರೂಪಾಯಿ ಹಣ ಪಡೆದು ಲಿಂಬೆ ಹಣ್ಣು, ಬೂದಿ, ಕೈಗೆ ಹಚ್ಚಲು ಎಣ್ಣೆ ನೀಡಿದ್ದರು. ಆದರೆ ಅವರು ಹೇಳಿದಂತೆ ಮಾಡಿದರೂ ಕೈ ನೋವು ವಾಸಿ ಆಗಿರಲಿಲ್ಲ.
ಇದನ್ನೂ ಓದಿ ಹಿಂದೂ ದೇವರ ಅವಹೇಳನ ಆರೋಪ; ನಕಲಿ ಬಾಬಾನಿಗೆ ಹಿಗ್ಗಾಮುಗ್ಗಾ ಥಳಿತ
ಈ ಬಗ್ಗೆ ವಿಚಾರಿಸಲು ಗಂಗಿಮಡಿ ಆಶ್ರಯ ಕಾಲೊನಿಗೆ ಕರೆಸಿ ಆತನನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಐದಾರು ಜನರು ಸೇರಿ ಸಾರ್ವಜನಿಕವಾಗಿ ರಸ್ತೆಯಲ್ಲಿ ಥಳಿಸಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದರು. ಅದರ ವಿಡಿಯೋ ಕೂಡಾ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಕಲಿ ಬಾಬಾನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿಲಾಗಿತ್ತು.

ಈ ಕುರಿತು ಶಿವಾನಂದ ಕುರಿ ಎಂಬುವವರು ಗದಗ ಗ್ರಾಮೀಣ ಠಾಣೆಯಲ್ಲಿ ವಂಚನೆ ಹಾಗೂ ದೇವರ ನಿಂದನೆ ದೂರು ದಾಖಲಿಸಿದ್ದರು.
ಪ್ರತಿ ದೂರು ನೀಡಿದ ಪತ್ನಿ
ಥಳಿತಕ್ಕೊಳಗಾದ ಅಸೀಪ್ ಜಾಗಿರದಾರನ ಪತ್ನಿ ಫರಿದಾ ಜಾಗಿರದಾರ ಎಂಬುವವರು
ಶಿವಾನಂದ ಕುರಿ, ಮಹೇಶ ರೋಖಡೆ, ಈಶ್ವರ ಕಾಟವಾ, ಮಹಾಂತೇಶ ಪಾಟೀಲ ಹಾಗೂ ಪ್ರೇಮಾ ಗುಡಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ 1860 (u/s- 143, 147, 341, 323, 504, 506, 149)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.