ವಿಜಯಸಾಕ್ಷಿ ಸುದ್ದಿ, ಗದಗ
ಒಂದು ದನದ ದೊಡ್ಡಿ ನಿರ್ಮಾಣ ಮಾಡಿ ಎರಡು ಬಿಲ್ ಮಾಡಿ ಕೊಡುವಂತೆ ಒತ್ತಾಯಿಸಿ ಪದೇ ಪದೇ ಗ್ರಾಮ ಪಂಚಾಯತಿ ನೌಕರರಿಗೆ, ಸಿಬ್ಬಂದಿಯ ನೌಕರಿಗೆ ಅಡ್ಡಿಪಡಿಸುತ್ತಾ, ಇಲ್ಲಸಲ್ಲದ ಮಾಹಿತಿ ಕೇಳಿದ್ದ ಮಹಿಳೆಯೊಬ್ಬರು ಆಕ್ರೋಶಗೊಂಡು ಗ್ರಾ.ಪಂ. ಅಧ್ಯಕ್ಷೆ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಕಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಮನವ್ವ ದುರಗಪ್ಪ ಬಂಡಿವಡ್ಡರ್ ಹಲ್ಲೆಗೊಳಗಾದ ಮಹಿಳೆ. ಕಲಕೇರಿ ಗ್ರಾಮದ ಶಾಂತವ್ವ ಎಂಬುವವರು ಒಂದು ದನದ ದೊಡ್ಡಿ ನಿರ್ಮಿಸಿಕೊಂಡಿದ್ದರು. ಆ ಬಿಲ್‌ಗಾಗಿ ಗ್ರಾ.ಪಂ. ಕಾರ್ಯಾಲಯಕ್ಕೆ ಅಲೆದಾಡಿ ಸುಸ್ತಾಗಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ನಿರ್ಮಾಣ ಮಾಡಿದ್ದು ಒಂದು ದನದ ದೊಡ್ಡಿ. ಆದರೆ ಎರಡು ಬಿಲ್ ಮಾಡಿ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ಬಿಲ್ ಮಾಡಿ ಕೊಡದ ನೌಕರರಿಗೆ ಇಲ್ಲಸಲ್ಲದ ಮಾಹಿತಿ ಕೇಳಿದ್ದಾರೆ ಅನ್ನುವ ಮಾಹಿತಿ ಅಧ್ಯಕ್ಷೆ ಯಮನವ್ವ ಬಂಡಿವಡ್ಡರ್ ಅವರು ಕೊಟ್ಟಿರುವ ದೂರಿನಲ್ಲಿದೆ.
ಇಷ್ಟಕ್ಕೆ ಸುಮ್ಮನಾಗದ ಶಾಂತವ್ವ, ತಮ್ಮ ಮನೆ ಮುಂದೆ ಹಾದು ಹೋಗುತ್ತಿದ್ದ ಅಧ್ಯಕ್ಷೆ ಯಮನವ್ವ ಬಂಡಿವಡ್ಡರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.