ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ತಾಯಿ ಶರ್ಮಿಳಾ ಪಟೌಡಿ, ಸೋದರಿಯರಾದ ಸೋಹಾ, ಸಬಾ ಅವರಿಗೆ ಕಾನೂನು ಹೋರಾಟದಲ್ಲಿ ತೀವ್ರ ಮುಖಭಂಗವಾಗಿದೆ. ನಟನ ಕುಟುಂಬಕ್ಕೆ ಸೇರಿದ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ಮುಟ್ಟುಗೋಲು ಹಾಕಿದೆ.
ನಟ ಸೈಫ್ ಅಲಿ ಖಾನ್ ಹಾಗೂ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ. ಮಧ್ಯಪ್ರದೇಶದ ಭೋಪಾಲ್ ಹಾಗೂ ಸುತ್ತಮುತ್ತ ಪಟೌಡಿ ಫ್ಯಾಮಿಲಿಯು ಈ ಹಿಂದೆ ಭಾರಿ ಆಸ್ತಿಪಾಸ್ತಿ ಹೊಂದಿತ್ತು. ಈ ಆಸ್ತಿಗಳನ್ನೆಲ್ಲಾ ಮಧ್ಯಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎನಿಮಿ ಪ್ರಾಪರ್ಟಿ ಎಂದು ಘೋಷಿಸಿ ತನ್ನ ವಶಕ್ಕೆ ತೆಗೆದುಕೊಳ್ಳಲು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಸೈಫ್ ಅಲಿ ಖಾನ್ ಹಾಗೂ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಸೈಫ್ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯ ಪ್ರದೇಶದ ಹೈಕೋರ್ಟ್ ವಜಾಗೊಳಿಸಿದೆ.
ಇದರ ಜೊತೆಗೆ 2000ನೇ ಇಸವಿಯಲ್ಲಿ ಕೆಳ ನ್ಯಾಯಾಲಯವು ಮಧ್ಯಪ್ರದೇಶದಲ್ಲಿರುವ ಪಟೌಡಿ ಕುಟುಂಬದ ಆಸ್ತಿಗೆ ಸೈಫ್ ಅಲಿಖಾನ್, ಸೋಹಾ, ಸಬಾ, ತಾಯಿ ಶರ್ಮಿಳಾ ಉತ್ತರಾಧಿಕಾರಿಗಳು ಎಂದು ಘೋಷಿಸಿದ್ದ ಆದೇಶ ರದ್ದುಪಡಿಸಿದೆ.