ವಿಜಯಸಾಕ್ಷಿ ಸುದ್ದಿ, ಬೆಳಗಾವಿ
Advertisement
ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿದ ಮೀನುಗಾರ ತಾನೇ ನೀರು ಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಇಂದು ನಡೆದಿದೆ. ನೀರು ಪಾಲಾದ ಯುವಕನನ್ನು ಹುಕ್ಕೇರಿ ಪಟ್ಟಣದ ಶರೀಫ್ ಖಂದಾಜೆ (30) ಎಂದು ಗುರುತಿಸಲಾಗಿದೆ.
ಮಾಂಜರಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಓಂಕಾರ್ (12) ಮಾಯನ್ನವರ ಎಂಬ ಬಾಲಕ ಈಜಲೆಂದು ನದಿಗೆ ಇಳಿದಿದ್ದು, ಈಜು ಬಾರದೆ ಮುಳುಗಲಾರಂಭಿಸಿದ್ದಾನೆ. ಇದನ್ನು ಗಮನಿಸಿದ ಮೀನು ಹಿಡಿಯುತ್ತಿದ್ದ ಯುವಕ ಶರೀಫ್ ನದಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಾನೆ. ಆದರೆ ದಡ ಮುಟ್ಟಲು ಸಾಧ್ಯವಾಗದೇ ತಾನೇ ನೀರು ಪಾಲಾಗಿದ್ದಾನೆ.
ಮೃತ ಯುವಕನ ಶವ ಪತ್ತೆಗಾಗಿ ಎನ್ ಡಿ ಆರ್ ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸಿದೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.