ವಿಜಯಸಾಕ್ಷಿ ಸುದ್ದಿ, ವಿಜಯಪುರ: ತನಗೆ ನೀಡಿದ್ದ ವಿಶೇಷ ಭದ್ರೆತಯನ್ನು ಈಗ ಹಿಂಪಡೆಯಲಾಗಿದ್ದು, ಈ ಮೂಲಕ ಸಿಎಂ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
ಈ ಕುರಿತು ಸಿಎಂ ಅವರಿಗೆ ಪತ್ರ ಬರೆದಿರುವ ಯತ್ನಾಳ್, ತನಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ದಿಢೀರ ಹಿಂದಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ, ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಸಿಎಂ, ಗೃಹ ಸಚಿವ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಯತ್ನಾಳ ಪತ್ರ ಬರೆದಿದ್ದಾರೆ.

ನಾನು ಪ್ರಖರ ಹಿಂದೂಪರವಾದ ಮತ್ತು ಜನಪರವಾದ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಈ ಹಿಂದೆ ಅನೇಕ ಬಾರಿ ಕೆಲವು ಹಿಂದೂ ವಿರೋಧಿ, ಮತಾಂಧ ಶಕ್ತಿಗಳು ದಾಳಿಯ ಮುನ್ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ಈವರೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಸಿಎಂ ಎಂದಿನಂತೆ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಪತ್ರದಲ್ಲಿ ಯತ್ನಾಳ್ ಆರೋಪ ಮಾಡಿದ್ದಾರೆ.
ಪೊಲೀಸ್ ಭದ್ರತೆಯನ್ನು ದಿಢೀರಾಗಿ ಹಿಂಪಡೆದಿದ್ದೀರಿ. ಇದರ ಹಿಂದಿರುವ ದುರುದ್ದೇಶ ಗೊತ್ತು. ಇದು ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸನ್ನು ಇದು ಬಿಂಬಿಸುತ್ತದೆ. ಇದರಿಂದ ಹಿಂದೂಪರ, ಜನಪರ, ಅನ್ಯಾಯದ ವಿರುದ್ಧ ನನ್ನ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಸರಕಾರವನ್ನು ನಂಬಿ ನಾನು ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ನಿರಂತರರವಾಗಿರುತ್ತದೆ. ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ, ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಯತ್ನಾಳ್ ಪತ್ರದಲ್ಲಿ ವಿವರಣೆ ನೀಡಿದ್ದಾರೆ.