ವಿಜಯ ಸಾಕ್ಷಿ ಸುದ್ದಿ, ಹಾವೇರಿ
ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತಿಯ ನಾಯಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಿ ಸಿಎಂ ಸ್ಥಾನ ಕೊಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ಸಿಎಂ ಹಾಗೂ ನಾಯಕತ್ವದ ಬದಲಾವಣೆಯ ಮಾತೇ ಇಲ್ಲ. ಸದ್ಯ ಇಂತಹ ಚರ್ಚೆಗಳು ಅಪ್ರಸ್ತುತ ಎಂದು ಹೇಳಿದ್ದಾರೆ.
ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಯಾರೂ ಅಧಿಕಾರಕ್ಕಾಗಿ ಅಂಟಿ ಕೂತಿಲ್ಲ. ನಾವೆಲ್ಲ ಹೈಕಮಾಂಡ್ ಆದೇಶದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಹೀಗಾಗಿ ಸಿಎಂ ಅವರು ನಮಗೆಲ್ಲ ಆದರ್ಶರಾಗಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಯೋಗೇಶ್ವರ ಅವರು ನಿನ್ನೆಯೇ ಈ ಕುರಿತು ಮಾತನಾಡಿದ್ದಾರೆ. ಸಿಎಂ ಕುರಿತು ನಮ್ಮಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಇದು ಎಲ್ಲಿಂದ ಸೃಷ್ಟಿಯಾಗುತ್ತಿದೆ ಎಂಬುವುದು ಆಶ್ಚರ್ಯವಾಗಿದೆ. ನಮ್ಮದು ಪ್ರಜಾಪ್ರಭುತ್ವ ಸಂಘಟನೆ. ನಮ್ಮಲ್ಲಿನ ಶಿಸ್ತು ಸಮಿತಿ ಈಗಾಗಲೇ ಎಚ್ಚರಿಕೆ ನೀಡಿ ಯತ್ನಾಳ್ ಅವರಿಗೆ ನೊಟೀಸ್ ನೀಡಿದೆ. ಒಬ್ಬ ಶಾಸಕನಿಗೆ ಮೂರು ಹಂತದ ನೊಟೀಸ್ ಗಳನ್ನು ಕೊಡಬೇಕಿದೆ. ಆ ಎಲ್ಲ ಕಾರ್ಯ ಈಗಾಗಲೇ ನಡೆಯುತ್ತಿದೆ. ಇನ್ನಷ್ಟು ತಪ್ಪು ಮಾಡಿದರೆ ಮುಂದಿನ ಎಲ್ಲ ನಿರ್ಧಾರಗಳನ್ನು ಕೇಂದ್ರ ತೆಗೆದುಕೊಳ್ಳುತ್ತದೆ ಎಂದು ಯತ್ನಾಳ್ ಬಗ್ಗೆ ಹೇಳಿದ್ದಾರೆ.