ವಿಜಯಸಾಕ್ಷಿ ಸುದ್ದಿ, ಗದಗ:
‘ನಮ್ಮ ಸ್ವಂತ ಅಕ್ಕ ತಂಗಿಯರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದಲೇ ಬಿಗಿ ಮತಾಂತರ ಕಾಯ್ದೆ ತರಲಾಗುತ್ತದೆ. ಹಿಂದೂ ಸಮಾಜಕ್ಕೆ ತೊಂದರೆ ಆಗಬಾರದು ಎಂದು ಕಾಯ್ದೆ ಮಾಡುತ್ತಿದ್ದರೆ; ಬೆರೆಕೆಯವರು ಮಾತ್ರ ವಿರೋಧ ಮಾಡುತ್ತಿದ್ದಾರೆ’
ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಶನಿವಾರ ರಾತ್ರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಪೂರ್ಣ ಬಲವಂತದ ಮತಾಂತರವೋ, ಆಸೆ ಆಮಿಷದ ಮತಾಂತರವೋ, ಲವ್ ಜೆಹಾದಿಯೋ
ಮತಾಂತರ ಕಾಯ್ದೆ ವಿರೋಧ ಮಾಡುತ್ತಿರುವವರ ಕುಟುಂಬದಲ್ಲಿ ಆದಾಗ ಮಾತ್ರ ಅದರ ತೀವ್ರತೆ ಎಷ್ಟೆಂಬುದು ಅವರಿಗೆ ಗೊತ್ತಾಗುತ್ತದೆ’ ತಿರುಗೇಟು ನೀಡಿದರು.
ಅಧಿಕಾರಕ್ಕೆ ಬಂದರೆ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಧೂಳೀಪಟ ಆಗಲಿದೆ. ಅವರ ಸರ್ಕಾರ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ಮುಸಲ್ಮಾನರನ್ನು ತೃಪ್ತಿಪಡಿಸುವ ಯೋಜನೆಯಲ್ಲಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ. ಸಿದ್ದರಾಮಯ್ಯ ಅವರ ಸಿಎಂ ಕನಸು ನನಸಾಗುವುದಿಲ್ಲ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ತಾಲೂಕಾಧ್ಯಕ್ಷ ರವಿ ವಗ್ಗನವರ,ರವಿ ಶಿದ್ಲಿಂಗ್ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.