ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣ ಪಂಚಾಯತ್ ಚುನಾವಣೆ ಮುಗಿದು ಎರಡು ವರ್ಷದ ನಂತರ ಮೀಸಲಾಯಿತಿ ಪ್ರಕಟವಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
ನರೇಗಲ್ಲ ಪಪಂ ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿವೆ.
ಸ್ಥಳೀಯ ಪಪಂ ಅಧಿಕಾರದ ಚುಕ್ಕಾಣೆ ಹಿಡಿಯಲು ಬಿಜೆಪಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿಯಿಂದ ಗೆಲುವು ಸಾಧಿಸಿದ ಅಕ್ಕಮ್ಮ ಮಣ್ಣೊಡ್ಡರ, ವಿಜಯಲಕ್ಷ್ಮೀ ಚಲವಾದಿ ಇವರ ಇಬ್ಬರ ನಡುವೆ ಎಸ್‌ಸಿ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಉಳಿದ ಬಿಜೆಪಿಯ ಎಲ್ಲ ಸದಸ್ಯರು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಅಭಿವೃದ್ಧಿ ಪರ ಆಡಳಿತ ಅಗತ್ಯ
ಕಳೆದ ಎರಡು ವರ್ಷಗಳಿಂದ ಪಟ್ಟಣ ಅಭಿವೃದ್ಧಿ ಕಾರ್ಯ ಸಂಪೂರ್ಣ ಮರೀಚಿಕೆಯಾಗಿದೆ. ಪಟ್ಟಣ ಪಂಚಾಯತ್ ಎರಡು ವರ್ಷಗಳಿಂದ ಅಧಿಕಾರಿಗಳ ಕೈಗೆ ಸಿಕ್ಕು ಅಕ್ಷರಶಃ ನಲುಗಿದೆ. ಇವೆಲ್ಲವುಗಳ ಸುಧಾರಣೆಗೆ ಪ್ರಮಾಣಿಕ, ನಿಷ್ಠೆ, ಉತ್ತಮ ಆಡಳಿತ, ಅಭಿವೃದ್ಧಿ ಪರ ಸಾರ್ವಜನಿಕರ ಸೇವೆ ಮಾಡುವ ಅಧ್ಯಕ್ಷ, ಉಪಾಧ್ಯಕ್ಷರು ಅಗತ್ಯವಾಗಿದೆ. ಈ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹತ್ತು, ಹಲವು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿ ನೇಮಕವಾದ ಅಧ್ಯಕ್ಷ, ಉಪಾಧ್ಯಕ್ಷರ ಹೇಗಲ ಮೇಲಿದೆ ಎಂದು ಪಟ್ಟಣದ ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದೆ. ಪಪಂ ಒಟ್ಟು 17 ಸ್ಥಾನಗಳ ಪೈಕಿ 12 ಸ್ಥಾನ ಬಿಜೆಪಿ ಗೆಲ್ಲುವುದರ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು ಇದರಲ್ಲಿ 2 ಎಸ್‌ಸಿ ಮಹಿಳಾ ಹಾಗೂ ೩ ಸಾಮಾನ್ಯ ಮಹಿಳಾ ಸದಸ್ಯರಿದ್ದು, 7 ಪುರುಷರಿದ್ದಾರೆ.
ಉಳಿದ ಸ್ಥಾನಗಳ ಪೈಕಿ 3 ರಲ್ಲಿ ಒಂದು ಕಾಂಗ್ರೆಸ್, ಎರಡು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಪೈಪೋಟಿ ನೀಡುವ ಅಕ್ಕಮ್ಮ ಮಣ್ಣೊಡ್ಡರ ಎಸ್‌ಸಿ ಮೀಸಲಾತಿ ವಾರ್ಡ್ 16 ರಿಂದ ಗೆಲವು ಸಾಧಿಸಿದ್ದಾರೆ. ಇನ್ನೂ ವಾರ್ಡ್ 6 ರ ಎಸ್‌ಸಿ ಮೀಸಲಾಯಿತಿ ವಾರ್ಡ್‌ನಿಂದ ವಿಜಯಲಕ್ಷ್ಮೀ ಚಲವಾದಿ ಗೆಲುವು ಸಾಧಿಸಿದ್ದಾರೆ. ಇವರ ಇಬ್ಬರ ನಡುವೆ ಅಧ್ಯಕ್ಷ ಸ್ಥಾನಕ್ಕೆ ನೇರ ಹಣಾಹಣೆ ನಡೆಯಲಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ 7 ಪುರುಷರು ಹಾಗೂ 3 ಮಹಿಳೆಯರು ಸದಸ್ಯರಿದ್ದಾರೆ. ಇದರಲ್ಲಿ ಫಕೀರಪ್ಪ ಮಳ್ಳಿ, ಶ್ರೀಶೈಲಪ್ಪ ಬಂಡಿಹಾಳ, ಕುಮಾರಸ್ವಾಮಿ ಕೋರಧ್ಯಾನಮಠ, ಈರಪ್ಪ ಜೋಗಿ, ಮಲ್ಲಿಕಸಾಬ ರೋಣದ, ಫಕೀರಪ್ಪ ಬಂಬ್ಲಾಪೂರ, ಮಲ್ಲಿಕಾರ್ಜುನ ಭೂಮನಗೌಡ್ರ ಸೇರಿದಂತೆ ಮಹಿಳಾ ಸದಸ್ಯರಾದ ವಿಶಾಲಾಕ್ಷಿ ಹೊಸಮನಿ, ಜ್ಯೋತಿ ಪಾಯಪ್ಪಗೌಡ್ರ, ಸುಮಿತ್ರಾ ಕಮಲಾಪೂರ ಸೇರಿದಂತೆ ವಾರ್ಡ್ ನಂ. 11 ರಿಂದ ಗೆಲುವು ಸಾಧಿಸಿ ಬಿಜೆಪಿಗೆ ಬೆಂಬಲ ನೀಡಿರುವ ಮಂಜುಳಾ ಹುರಳಿ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ನೇರ ಸ್ಪರ್ಧೆಯಲ್ಲಿದ್ದಾರೆ.