ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ:
ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ಗ್ರಾಮೀಣ ಮಟ್ಟದ ಅಧಿಕಾರಿಗಳಿಗಂತು ಇದೊಂದು ಅಸ್ತ್ರವೂ, ವರವೂ ಆದಂತಿದೆ. ಸಾರ್ವಜನಿಕರು ಏನೇ ಕೇಳಿದರೂ ಗ್ರಾಪಂ ಚುನಾವಣೆ ಮುಗಿಯಲಿ, ಮುಂದೆ ನೋಡೋಣ ಎಂದು ಹೇಳಿ ಸಾಗಿ ಹಾಕುತ್ತಿದ್ದಾರೆ.
ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಕೊಪ್ಪಳ ತಾಲೂಕಿನ ಕೊಳೂರು ಗ್ರಾಮ ಪಂಚಾಯಿತಿಯ ಪುರಾಣ. ಕೊಳೂರು ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಕೇಳಲು ಹೋದಾಗ ಪಿಡಿಒ ಸಿದ್ದಮ್ಮ ಮಠದ ಅವರು ಚುನಾವಣೆ ನೆಪ ಹೇಳಿದ್ದಾರೆ. ಮಂಗಳಾಪುರದ ಮುತ್ತು ದೊಡ್ಡಮನಿ ಎಂಬ ಯುವಕ ಈ ಕುರಿತು ಜಿಪಂ ಸಿಎಸ್ ಅವರಿಗೆ ದೂರು ನೀಡಿದ್ದಾನೆ. ದೂರು ಬಂದ ತಕ್ಷಣ ಸಿಎಸ್ ಅವರು ಕೊಳೂರು ಗ್ರಾಪಂ ಪಿಡಿಓ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದು ಪಿಡಿಓ ಸಿದ್ದಮ್ಮ ಕೆಂಡಾಮಂಡಲರಾಗಿದ್ದಾರೆ.
ದೂರು ನೀಡಿದ ಯುವಕ ನರೇಗಾ ಕೆಲಸದ ವಿಚಾರವಾಗಿ ಪಿಡಿಓ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಮಹಿಳೆಯರಿಗೆ ಚುನಾವಣೆ ಮುಗಿದ ಮೇಲೆ ಕೆಲಸ ಕೊಡ್ತಿನಿ. ನೀನೂ ಅವರ ಹಾಗೆ ಕೆಲಸ ಕೇಳೋನು. ನೀನೇನು ದೊಡ್ಡ ಲೀಡರ್ ಅಲ್ಲ, ನನ್ನ ಹಿಂದೆ ತಿರುಗಾಡಬೇಡ. ಮಹಿಳೆಯರು ಬರಲಿ, ಅವರು ಬಂದಾಗ ಪಂಚಾಯಿತಿಗೆ ಕಡೆಗೆ ಬಾ. ಚುನಾವಣೆ ಮುಗಿದ ನಂತರ ಕೆಲಸ ಕೊಡ್ತಿನಿ. ಫಾರಂನ್ನು ನಾನೇ ತುಂಬುತ್ತೇನೆ. ಇಲ್ಲಿ ಪಿಡಿಓ ನಾನೇ ಹೊರತು ನೀನಲ್ಲ. ನಿನ್ನ ಆಟ ಬೇರೆಯವರ ಹತ್ತಿರ ಇಟ್ಕೊ. ನನ್ನ ಹತ್ತಿರ ನಡೆಯಲ್ಲ. ಇಡೋ ಫೋನು ಅಂತ ಆವಾಜ್ ಹಾಕಿದ ಆಡಿಯೊ ವೈರಲ್ ಆಗಿದೆ.
ಪಿಡಿಓ ಅವರು ನನ್ನ ಚಾರಿತ್ರ್ಯ ವಧೆಯಾಗುವಂಥ ಮಾತುಗಳನ್ನಾಡಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ. ವಯಸ್ಸಿನಲ್ಲಿ ಅವರು ನನ್ನ ತಾಯಿ ಸಮಾನರಾಗಿದ್ದಾರೆ. ನನಗಿಂತಲೂ ಹೆಚ್ಚು ವಯಸ್ಸಿನ ಮಕ್ಕಳಿರುವ ಅವರು, ಉದ್ದೇಶಪೂರ್ವಕವಾಗಿ ನನ್ನ ವ್ಯಕ್ತಿತ್ವ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಡವರಿಗೆ ಕೆಲಸ ಕೊಡಿ ಎಂದು ಕೇಳಿದ್ದೇ ತಪ್ಪಾ ಸರ್?
-ಮುತ್ತು ದೊಡ್ಡಮನಿ, ಮಂಗಳಾಪುರ.
ಚುನಾವಣೆಗೂ, ನರೇಗಾ ಕೆಲಸಕ್ಕೂ ಸಂಬಂಧ ಇಲ್ಲ. ಬುಧವಾರ ಬಹದ್ದೂರ್ ಬಂಡಿ ಕೆರೆ ಪರಿಶೀಲನೆಗೆ ಹೊರಟಿದ್ದೇವೆ. ನಾಡಿದ್ದೇ ಅರ್ಹರಿಗೆ ಫಾರಂಸಮೇತ ನರೇಗಾದಡಿ ಕೆಲಸ ಕೊಡ್ತಿವಿ. ಮುತ್ತು ಎಂಬ ಹುಡುಗ ಫಾರಂಗಳಿಗೆ ಸಹಿ ಹಾಕುವಂತೆ ಹಿಂದೆ ಹಿಂದೆ ದುಂಬಾಲು ಬೀಳುತ್ತಾನೆ. ಹಿಂದೆ ಇದ್ದ ಪಿಡಿಓಗಳಿಗೂ ಇದೇ ರೀತಿ ಕಾಟ ಕೊಟ್ಟಿದ್ದಾನಂತೆ. ನಾನು ಚುನಾವಣೆ ನಂತರ ಕೆಲಸ ಕೊಡ್ತಿನಿ ಅಂತ ಹೇಳೇ ಇಲ್ಲ.
-ಸಿದ್ದಮ್ಮ ಮಠದ, ಪಿಡಿಓ ಕೊಳೂರು ಗ್ರಾಪಂ.