ವಿಜಯಸಾಕ್ಷಿ ಸುದ್ದಿ, ಗದಗ:
ಹಳೆಯ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ವಿದ್ಯಾರ್ಥಿಯೊಬ್ಬನಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ಬೈದು ಫೋನಿನಲ್ಲಿ ಕೀಳುಮಟ್ಟದ ಶಬ್ಧಗಳಿಂದ ಬೈದು ತಾನು ಪಿಎಸ್‌ಐ ಇದ್ದೇನೆ ಎಂದು ಸುಳ್ಳು ಹೇಳಿ ಬೆದರಿಸಿರುವ ಬಗ್ಗೆ ಪ್ರಕರಣವೊಂದು ರೋಣದಿಂದ ವರದಿಯಾಗಿದೆ.
ಘಟನೆಯ ವಿವರ
ದೂರು ನೀಡಿರುವ ವಿದ್ಯಾರ್ಥಿ ರೋಣದ ವಿಜಯ ದೇವಪ್ಪ ಮಡಿವಾಳರ ಆಗಿದ್ದು, ಈತ ನಿತ್ಯ ರೋಣದಿಂದ ಗಜೇಂದ್ರಗಢ ಪಟ್ಟಣದಲ್ಲಿರುವ ಸರ್ಕಾರಿ ಡಿಪ್ಲೋಮಾ ಕಾಲೇಜಿಗೆ ವ್ಯಾಸಂಗಕ್ಕಾಗಿ ಹೋಗುತ್ತಿದ್ದ. ರೋಣದವನೇ ಆದ ಸಂತೋಷ ಫಕೀರಪ್ಪ ಚಲವಾದಿ ಎಂಬ ವ್ಯಕ್ತಿ ಪರಿಚಯದವನಿರುತ್ತಾನೆ.
ಈಗೊಂದು ವರ್ಷದ ಹಿಂದೆ ವಿಜಯ ಮಡಿವಾಳರನ ಸ್ನೇಹಿತ ಸತೀಶ ಉಳ್ಳಾಗಡ್ಡಿ ಎಂಬುವನ ಅಣ್ಣ ಸಂಜು ಉಳ್ಳಾಗಡ್ಡಿ ಈತ ಫಿರ್ಯಾದಿಯ ಸ್ನೇಹಿತ ಸಂತೋಷ ಚಲವಾದಿ ಹಾಗೂ ಇನ್ನೂ ಕೆಲವರ ಮೇಲೆ ಯಾವುದೋ ವಿಷಯಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸಂತೋಷ ಹಾಗೂ ಅವನ ತಮ್ಮ ನಾಗರಾಜ ಚಲವಾದಿ ಇಬ್ಬರೂ ಸೇರಿಕೊಂಡು ಎದುರಾದಾಗಲೆಲ್ಲಾ ನಮ್ಮ ವೈರಿ ಸತೀಶ ಉಳ್ಳಾಗಡ್ಡಿಯ ಜೊತೆ ಅಡ್ಡಾಡಬೇಡ. ಅವನ ಸಹವಾಸ ಬಿಟ್ಟುಬಿಡು. ಇಲ್ಲವಾದರೆ ನಿನಗೂ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಇದಾದ ಬಳಿಕ, ಜುಲೈ.೧ರಂದು ಬೆಳಿಗ್ಗೆ ೮-೩೦ರ ಹೊತ್ತಿಗೆ ಕಾಲೇಜಿಗೆ ತೆರಳುತ್ತಿದ್ದ ವಿಜಯ ಮಡಿವಾಳರ ರೋಣ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಸಂತೋಷ ಚಲವಾದಿ ಇವನ ಹತ್ತಿರವೇ ಬಂದು, `ಲೇಯ್, ಬೋ…ಮಗನೇ ವಿಜಯ, ಶಿವಪೇಟೆಯ ಹುಡುಗ್ರ ಜೊತಿ ಅಡ್ಯಾಡಬೇಡ ಅಂತ ನಿನಗೆ ಮೊದಲೇ ಹೇಳಿದ್ದೆ ಹೌದಿಲ್ಲೋ? ಮತ್ಯಾಕ ಅವರ ಜೋಡಿ ಓಡಾಡ್ತಿದ್ದೀ? ನಿನಗೊಂದು ಗತಿ ಕಾಣಿಸ್ತೇನಿ ನೋಡ್ತಿರು ಎಂದು ಬೆದರಿಕೆ ಹಾಕಿದ್ದ.
ನಂತರ ಜುಲೈ.೪ರ ರಾತ್ರಿ ೮-೫೬ರ ಹೊತ್ತಿಗೆ ವಿಜಯ ಮಡಿವಾಳರ ಮೊಬೈಲ್ ನಂಬರಿಗೆ ಕರೆಯೊಂದು ಬಂದಿದ್ದು, ಯಾರು ಮಾತಾಡ್ತಿರೋದು ಅಂತ ಕೇಳಿದಾಗ ಆ ವ್ಯಕ್ತಿಯು`ಸಂತೂಗೆ ಏನು ಮಾತಾಡಿದಿ ನೀನು? ನಾನು ಪಿ.ಎಸ್.ಐ ಅದೀನಲೇ ಎಂದು ಧಮಕಿ ಹಾಕಿ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಸಿದ್ದಾರೆ.
ಅಲ್ಲದೇ ಅದೇ ದಿನ ರಾತ್ರಿ ೧೦ ಗಂಟೆಯ ಹೊತ್ತಿಗೆ ಆರೋಪಿ ಸಂತೋಷ ಹಾಗೂ ನಾಗರಾಜ ಫಕೀರಪ್ಪ ಚಲವಾದಿ ಇಬ್ಬರೂ ಕೂಡಿಕೊಂಡು ವಿಜಯನ ಮನೆಯ ಬಳಿಯೇ ಬಂದು ಅವನ ತಂದೆ ದೇವಪ್ಪ ಮಡಿವಾಳರ ಇವರಿಗೆ `ನಿಮ್ಮ ಮಗ ವಿಜಯನಿಗೆ ಬುದ್ಧಿ ಹೇಳಿ. ಸತೀಶ ಉಳ್ಳಾಗಡ್ಡಿ ಸಂಗಡ ಅಡ್ಡಾಡಲಿಕ್ಕೆ ಬಿಡಬೇಡ್ರಿ. ಹಾಗೆ ಮತ್ತೆ ಅಡ್ಡಾಡಿದ್ದು ಕಂಡಿದ್ದೇ ಹೌದಾದರೆ ಆತನನ್ನು ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರೋಣದ ಪೊಲೀಸರು ತನಿಖೆ ನಡೆಸಿದ್ದಾರೆ.