ವಿಜಯಸಾಕ್ಷಿ ಸುದ್ದಿ, ಗದಗ
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವಂಥದ್ದು ಸರಕಾರದ ಕರ್ತವ್ಯ ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಕುರಿತು ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ. ಮೀಸಲಾತಿಗಾಗಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಈ ಬಗ್ಗೆ ಮೀನಾಮೇಷ ಎಣಿಸಬಾರದು. ಕಾಲಹರಣ ಮಾಡದೇ ಬೇಗನೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಾತಿಸಂಘಟನೆ ವಿಷಯಗಳನ್ನು ಸರಕಾರ ನಿರ್ಲಕ್ಷಿಸಬಾರದು.
ಜಾತಿ ಸಂಘರ್ಷ ನಿರ್ಲಕ್ಷಿಸಿದರೆ, ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.
ಸಮುದಾಯದವರು ರೊಚ್ಚಿಗೇಳುತ್ತಾರೆ. ಇದರಿಂದ ಸಾರ್ವಜನಿಕ ಆಸ್ತಿ, ಪಾಸ್ತಿಗಳು ಹಾನಿಯಾಗಬಹುದು. ಅಂತಹ ಘಟನೆಗಳಿಗೆ ಸರಕಾರ ಹೊಣೆಯಾಗಬಾರದು ಎಂದು ಕಿವಿಮಾತು ಹೇಳಿದರು.
ಮೀಸಲಾತಿ ಪಡೆಯುವದು ಅವರ ಹಕ್ಕು, ಅದೇನೂ ಭಿಕ್ಷೆ ಅಲ್ಲ.
ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು.
ಸಮುದಾಯ ಒಟ್ಟಾಗಿ ಕೆಲಸ ಮಾಡಿದಲ್ಲಿ ಸರಕಾರ ಬಿದ್ದು ಹೋಗುವ ಸಂದರ್ಭ ಬರಬಹುದು. ಸಮಾಜದ ಎಲ್ಲ ಶಾಸಕರು ಪಕ್ಷಭೇದ ಮರೆತು ರಾಜೀನಾಮೆಗೆ ತಯಾರಾದರೆ, ಮೀಸಲಾತಿ ಕೊಡಲೇಬೇಕಾಗುತ್ತದೆ.
ನಾಯಕತ್ವ ಬದಲಾವಣೆಗೆ ಸಾಕಷ್ಟು ಕಾರಣಗಳಿರುತ್ತವೆ. ಮುಂದೊಂದು ದಿನ ಮೀಸಲಾತಿ ವಿಷಯವೂ ನಾಯಕತ್ವ ಬದಲಾವಣೆಗೆ ಕಾರಣವಾಗಬಹುದು ಎಂದು ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.