ವಿಜಯಸಾಕ್ಷಿ ಸುದ್ದಿ, ಬಳ್ಳಾರಿ
ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದೆ. ಇಲ್ಲಯವರೆಗೆ ನಗರ ಪ್ರದೇಶಗಳಲ್ಲಿ ತನ್ನ ಅಟ್ಟಹಾಸ ಮೆರೆದಿದ್ದ. ಸೋಂಕು ಈಗ ಗ್ರಾಮೀಣ ಭಾಗದಲ್ಲಿ ಕೂಡ ತನ್ನ ಕಬಂಧಬಾಹು ಚಾಚುತ್ತಿದೆ. ಹೀಗಾಗಿ ಸರ್ಕಾರ ಕೊರೊನಾ ಕಟ್ಟಿ ಹಾಕಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇದರ ಮಧ್ಯೆ ಜನರು ಮೌಢ್ಯದ ಮೊರೆ ಹೋಗುತ್ತಿದ್ದಾರೆ.
ಈಗಾಗಲೇ ಹಲವೆಡೆ ಜನರು ದೇವರಿಗೆ ಬಲಿ, ಪೂಜೆ, ಹೋಮ – ಹವನ ನಡೆಸುತ್ತಿದ್ದಾರೆ. ಹಲವೆಡೆ ಊರಿನ ನಾಲ್ಕು ದಿಕ್ಕುಗಳಿಗೂ ಮಂತ್ರಿಸಿದ ತೆಂಗಿನ ಕಾಯಿ ಕಟ್ಟಿದ್ದಾರೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಅನ್ನವನ್ನೇ ಮಣ್ಣುಪಾಲು ಮಾಡಿದ್ದಾರೆ.
ಜಲ್ಲೆಯ ಕಗ್ಗಲ್ಲು ಗ್ರಾಮದಲ್ಲಿ ಈ ರೀತಿಯ ಕಾರ್ಯ ನಡೆದಿದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂರಾರು ಕೆಜಿ ಅನ್ನವನ್ನು ಊರ ಹೊರಗೆ ಎಸೆದಿದ್ದಾರೆ. ಪ್ರತಿ ಮನೆಯಿಂದ ಐದು ಕೆಜಿ ಅಕ್ಕಿಯಿಂದ ಅನ್ನ ಮಾಡಿ ಸಂಗ್ರಹಿಸಿ ರಾತ್ರೋ ರಾತ್ರಿ ನೆಲಕ್ಕೆ ಸುರಿದಿದ್ದಾರೆ.
ಈ ರೀತಿಯಾಗಿ ಅನ್ನ ಎಸೆದರೆ ಸಾಂಕ್ರಾಮಿಕ ರೋಗ ಊರಿಗೆ ಬರುವುದಿಲ್ಲ ಎಂಬುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಸಾಂಕ್ರಾಮಿಕ ರೋಗಗಳು ಬಂದ ಸಂದರ್ಭದಲ್ಲಿ ತಮ್ಮ ಹಿರಿಯರ ಕಾಲದಿಂದಲೂ ಈ ರೀತಿಯ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.