ವಿಜಯಸಾಕ್ಷಿ ಸುದ್ದಿ, ನರಗುಂದ
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರ ನರಗುಂದ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಮಂಗಳವಾರ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ರೋಣ-ಬೆಳಗಾವಿ ಬಸ್ ತಡೆದು ಶಿರೋಳದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಹೊಳೆಆಲೂರು, ಮೆಣಸಗಿ, ಕಪ್ಪಲಿ, ಕಲ್ಲಾಪುರ, ಶಿರೋಳ, ಗೊಳಗಂದಿ ಗ್ರಾಮಗಳ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಬಸ್ಸಿನ ಸೌಲಭ್ಯವಿಲ್ಲದೇ ದಿನನಿತ್ಯ ಪರದಾಡುತ್ತಿದ್ದಾರೆ.
ರೋಣದಿಂದ ಬೆಳಗಾವಿ ಹೋಗುವ ಒಂದೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಬೆಳಿಗ್ಗೆ ಬರುವ ಇದೊಂದೇ ಬಸ್ಸಿನಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪ್ರಯಾಣಿಸಿ ಕಾಲೇಜಿಗೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಇದೆ. ಒಂದು ವೇಳೆ ಪ್ರಯಾಣಿಕರಿಂದ ಬಸ್ ತುಂಬಿದರೆ, ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೊರೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹಲವು ಬಾರಿ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ಬಸ್ ಬಿಡುವಂತೆ ಪ್ರತಿಭಟಿಸಲಾಗಿತ್ತು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಅವರ ಗಮನಕ್ಕೂ ಬಂದಿತ್ತು. ಆದರೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಸಚಿವರು ಹೇಳಿದರೆಂದು ಒಂದು ತಿಂಗಳವರೆಗೆ ಬಸ್ ಬಿಟ್ಟಂತೆ ಮಾಡುವ ನರಗುಂದ ಡಿಪೋ ವ್ಯವಸ್ಥಾಪಕರು ಪುನಃ ಈ ಮಾರ್ಗದ ಬಸ್ ಸಂಚಾರ ಬಂದ್ ಮಾಡುತ್ತಿದ್ದಾರೆ. ಬಸ್ ಯಾಕೆ ಬಂದ್ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳು ಕೇಳಿದರೆ ‘ನಮಗೆ ಬಸ್ ಬಿಡುವುದು ಆಗುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ’ ಎಂದು ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಅಲ್ಲದೇ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆ. 7.45 ಕ್ಕೆ ಶಿರೋಳ ಮಾರ್ಗವಾಗಿ ಕೊಣ್ಣೂರ ಹಾಗೂ ಮ. 2.45 ಕ್ಕೆ ಕೊಣ್ಣೂರದಿಂದ ಶಿರೋಳಕ್ಕೆ ಬಸ್ ಸೌಲಭ್ಯದ ಅವಶ್ಯಕತೆ ಇದ್ದು, ಕೂಡಲೇ ಈ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿದರು.