ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ಸಮಾಜದ ಅನೇಕ ಶಾಸಕರು ಧನಸಹಾಯ ಮಾಡಿದ್ದಾರೆ. ಆದರೆ ಸಚಿವ ಮುರುಗೇಶ್ ನಿರಾಣಿ ವಾಹನ ಸರಬರಾಜು ಹೊರತುಪಡಿಸಿದರೆ ಒಂದು ಪೈಸೆ ಸಹ ನೀಡಿಲ್ಲ ಎಂದು ಕೂಡಲಸಂಗಮದ ಬಸವ ಶ್ರೀಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾದ ತಕ್ಷಣ ಪಾದಯಾತ್ರೆ ನಿಲ್ಲಿಸುವುದಾಗಿ ನಿರಾಣಿಯವರು ಸಿಎಂಗೆ ಹೇಳಿದ್ದರಿಂದ ನಮಗೂ ಮನವಿ ಮಾಡಿದರು. ಮೀಸಲಾತಿ ಸಿಗುವವರೆಗೂ ನಮ್ಮ ಸಮಾಜದವರು ಬರೀ ಮಂತ್ರಿಯಲ್ಲ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಿಎಂ ಅವರು ವಿಧಾನಸೌಧದಲ್ಲಿ ನಮಗೆ ಮಾತು ಕೊಟ್ಟಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ ಸದನದ ಒಳಗೇ ಸಮುದಾಯದ ಪರ ಹೋರಾಟ ಮಾಡಿದ್ದಾರೆ. ಮೀಸಲಾತಿಗಾಗಿ ಸಮಾಜ ಒಗ್ಗಟ್ಟಾಗಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಶ್ರೀಗಳು ನುಡಿದರು.
ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ಧನ್ಯವಾದ ಅರ್ಪಿಸಲು ನಗರಕ್ಕೆ ಆಗಮಿಸಿದ್ದ ಸ್ವಾಮಿಜಿ ನಗರದ ಕುಷ್ಟಗಿ ರಸ್ತೆಯಲ್ಲಿರುವ ಪಂಚಮಸಾಲಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ವಿಜಯಾನಂದ ಕಾಶಪ್ಪನವರ್ ಅವರನ್ನು ಕಳೆದ 2017ರಲ್ಲೇ ಅಧ್ಯಕ್ಷರಾಗಿ ಮಾಡಲಾಗಿದೆ.
ಅವರಿಗೆ ಧ್ವಜ ಹಸ್ತಾಂತರ ಮಾಡಿದ್ದೇವೆ ಅಷ್ಟೇ. ಪಾದಯಾತ್ರೆ ಲೆಕ್ಕ ಕೊಡಿ ಎಂದು ಸಚಿವ ನಿರಾಣಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮಿಜಿ ನಾವು ಯಾರು ಕೇಳಿದ್ರೂ ಲೆಕ್ಕ ಕೊಡೋದಕ್ಕೆ ಸಿದ್ಧರಿದ್ದೇವೆ. ನಮ್ಮ ಹೋರಾಟಕ್ಕೆ ಸಚಿವ ಮುರಿಗೇಶ ನಿರಾಣಿ ಒಂದೂ ಪೈಸೆ ಕೊಟ್ಟಿಲ್ಲ. ಹೋರಾಟಕ್ಕೆ ಒಂದಷ್ಟು ವಾಹನ ವ್ಯವಸ್ಥೆ ಮಾಡಿರಬಹುದಷ್ಟೇ. ಇದರ ಹೊರತಾಗಿ ಇತರೇ ಶಾಸಕರು- ಸಚಿವರಂತೆ ಹೋರಾಟಕ್ಕೆ ಹಣ ಕೊಟ್ಟಿಲ್ಲ ಈವರೆಗಂತೂ ಮುರುಗೇಶ ನಿರಾಣಿ ಹೋರಾಟದ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಿಲ್ಲ ಮುಂದೆ ಸಹಾಯ ಮಾಡಬಹುದು. ಕೇಳುತ್ತೇವೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಯಾವ ಸಮುದಾಯದ ವಿರುದ್ಧವೂ ಮಾತನಾಡಿಲ್ಲ ಕುತಂತ್ರಿಗಳು ಎಲ್ಲ ಸಮುದಾಯದಲ್ಲಿ ಇದ್ದಾರೆ. ಆ ಕುತಂತ್ರಿಗಳ ಬಗ್ಗೆ ಮಾತನಾಡಿದರೆ ಯಾರೂ ನಮ್ಮ ಬಗ್ಗೆ ಮಾತಾಡಿದ್ರು ಅಂತಾ ತಿಳಕೋಬಾರದು ಯಾವುದೇ ಸಮುದಾಯ ನಮಗೆ ಅಂದಿದ್ದಾರೆ ಅಂತಾ ಯಾಕೆ ತಿಳಿದುಕೊಳ್ಳಬೇಕು ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮರ್ಥಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ, ಕಳಕನಗೌಡ, ಅಮರೇಶ ಕರಡಿ, ಸಂಗಮೇಶ ಬಾದವಾಡಗಿ , ಕರಿಯಪ್ಪ ಮೇಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.