ವಿಜಯಸಾಕ್ಷಿ ಸುದ್ದಿ, ಗದಗ
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವಿನಿಂದ ಮನನೊಂದ ಪತಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ.
ಡೋಣಿ ಗ್ರಾಮದ ಪರಸಪ್ಪ ಮುದಿಯಪ್ಪ ಜಂಗಳಿ (42) ಎಂಬಾತನೇ ಜಮೀನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.
ಒಂದು ತಿಂಗಳ ಹಿಂದೆ ಪರಸಪ್ಪನ ಪತ್ನಿ ಶಾಂತವ್ವ( 36) ಅನಾರೋಗ್ಯದಿಂದ ಮೃತಪಟ್ಟಿದ್ದಳು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಪರಸಪ್ಪ ಮಾನಸ್ಸಿಕವಾಗಿ ಕುಗ್ಗಿ ಹೋಗಿದ್ದ.
ಶುಕ್ರವಾರ ರಾತ್ರಿ ಜಮೀನಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಜಾನೆ ಮರದಡಿಯಲ್ಲಿ ನೇತಾಡುತ್ತಿದ್ದ ಶವ ನೋಡಿದ ಗ್ರಾಮಸ್ಥರು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಪರಿಶೀಲನೆ ಮಾಡಿದಾಗ, ಮೃತ ಪರಸಪ್ಪನ ಜೇಬಲ್ಲಿ ಪತ್ನಿ ಶಾಂತವ್ವಳ ಪೋಟೋ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.