ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ಬಸವರಾಜ್ ಬೊಮ್ಮಾಯಿ ಹಾಗೂ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಪಚುನಾವಣೆ, ಜಿಲ್ಲಾ ಪಂಚಾಯಿತಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುವುದಾಗಿ ಹೇಳುತ್ತಿರುವ ಮಾಜಿ ಸಿಎಂ ಹೇಳಿಕೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಟಾಂಗ್ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಎಲ್ಲ ಚುನಾವಣೆಗಳನ್ನ ಗೆದ್ದಿದ್ದೇವೆ. ಜನರು ಮೋದಿಯವರ ಮೇಲೆ ವಿಸ್ವಾಸವಿಟ್ಟಿದ್ದಾರೆ. ಮುಖ್ಯಮಂತ್ರಿಯಿಂದ ಪ್ರಧಾನಿಮಂತ್ರಿಯವರೆಗೆ ಒಂದೇ ಒಂದು ರೂಪಾಯಿ ಭ್ರಷ್ಟಾಚಾರದ ಆರೋಪವಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇಶದ ರೈತರು, ಕಾರ್ಮಿಕರು, ಬಡವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದ ಜೊತೆಗೆ ನಿಂತಿದ್ದಾರೆ. ಪ್ರಧಾನಿಗಳ ಜನ್ಮದಿನಾಚರಣೆಗೆ ನಾವು ಕೇಕ್ ಕಟ್ ಮಾಡಲಿಲ್ಲ, ಬಡವರ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದೇವೆ.
ಒಂದೇ ದಿನಕ್ಕೆ 2ಕೋಟಿ 30ಲಕ್ಷ ಜನರಿಗೆ ಕೋವಿಡ್ ವ್ಯಾಕ್ಷಿನ್ ಹಾಕಲಾಗಿದೆ. ನಮ್ಮನ್ನು ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ದೇಶದ ಜನರಿಗೆ ಅರ್ಥವಾಗಿದೆ. ಎಸ್ಸಿ ಎಸ್ಟಿ, ಒಬಿಸಿ ಸಮಾಜದವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಹೆಚ್ಚು ಪಾಲು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಅಭಿವೃದ್ಧಿಗಳನ್ನು ಕಾರ್ಯಕರ್ತರು ಜನಸಾಮಾನ್ಯರಿಗೆ ತಲುಪಿಸಬೇಕಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್‌ನವರು ಬಡವರಿಗೆ ಶುದ್ಧ ಕುಡಿಯುವ ನೀರು ಸಹ ಕೊಡಲು ಆಗಲಿಲ್ಲ. ಅರವತ್ತು ವರ್ಷದ ಆಡಳಿತದ ಕಾಂಗ್ರೆಸ್ ಪಕ್ಷಕ್ಕೆ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಕೊಡಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಭಾರತದ ಲಸಿಕೆ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಪಹಾಸ್ಯ ಮಾಡಿದ್ದರು ಎಂದರು.
ಪಂಜಾಬ್ ಮುಖ್ಯಮಂತ್ರಿಯನ್ನು ಹೇಳದೆ, ಕೇಳದೆ ಬದಲಿಸಲಾಗಿದೆ. ರಾಜಸ್ಥಾನದಲ್ಲಿ ಅತಂತ್ರ ಸ್ಥಿತಿಯಲ್ಲಿದೆ. ಸೋನಿಯಾ ಗಾಂಧಿ, ರಾಹುಲ್ ಗೆ ದೇಶ ನಡೆಸಲು ಸಾಧ್ಯವೇ ಇಲ್ಲ ಎಂದು ಮಾತಿನೇಟು ನೀಡಿದರು.