ವಿಜಯಸಾಕ್ಷಿ ಸುದ್ದಿ, ಪಟನಾ
ದೇಶದಲ್ಲಿ ಕೊರೊನಾದಿಂದಾಗಿ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ದಿನಪೂರ್ತಿ ಕಾಯಬೇಕಾದ ಪರಿಸ್ಥಿತಿ ಬಂದೋದಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಗಂಗಾ ನದಿಯಲ್ಲಿ ಹೆಣದ ರಾಶಿಗಳು ಹರಿದು ಬರುತ್ತಿದ್ದ ಆತಂಕ ಮನೆ ಮಾಡುತ್ತಿದೆ.
ಗಂಗಾ ನದಿಯಲ್ಲಿ 150ಕ್ಕೂ ಹೆಚ್ಚು ಮೃತದೇಹಗಳ ರಾಶಿ ಪತ್ತೆಯಾಗಿದೆ.
ಬಿಹಾರದ ಬಕ್ಸಾರ್ ಜಿಲ್ಲೆಯ ಚೌಸಾ ಗ್ರಾಮದ ಹತ್ತಿರದ ಗಂಗಾ ಮಹಾದೇವ್ ಘಾಟ್ ಬಳಿ ನೂರಾರು ಹೆಣಗಳು ತೇಲಿಬಂದಿದ್ದು, ತೀರ ಸೇರಿವೆ. ನಾಯಿ, ಹದ್ದು, ಕಾಗೆಗಳು ಹೆಣಗಳನ್ನು ಕಿತ್ತು ತಿನ್ನುವ ಭಯಾನಕ ದೃಶ್ಯ ಕಂಡು ಅಲ್ಲಿಯ ಜನ ಭಯಭೀತರಾಗಿದ್ದಾರೆ.
ಈ ಮೃತದೇಹಗಳು ಕೊರೊನಾ ಸೋಂಕಿತರದ್ದು ಎಂದು ಹೇಳಲಾಗಿದೆ. ಕಾರಣ, ಹರಿದು ಬಂದ ಮೃತ ದೇಹಗಳು ಸೀಲ್ ಮಾಡಿದ ಸ್ಥಿತಿಯಲ್ಲಿ ಇವೆ. ಸ್ಮಶಾನಗಳಲ್ಲಿ ದಿನಗಟ್ಟಲೆ ಕಾಯುವ ಹಾಗೂ ಅಂತ್ಯ ಸಂಸ್ಕಾರಕ್ಕೆ ದುಬಾರಿ ವೆಚ್ಚ ಇರುವ ಹಿನ್ನೆಲೆಯಲ್ಲಿ ಈ ರೀತಿ ಹೆಣಗಳನ್ನು ನದಿಗಳಿಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸದ್ಯ ಗಂಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಹೆಣಗಳು ದಡಕ್ಕೆ ಬಂದು ಸೇರುತ್ತಿವೆ. ಈ ಬೆಳವಣಿಗೆಯ ನಂತರ ದಡದ ಜನರ ಆತಂಕ ಹೆಚ್ಚಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನದಿಯಲ್ಲಿ ಸುಮಾರು 400 ರಿಂದ 500 ಮೃತ ದೇಹಗಳನ್ನು ಕಂಡಿದ್ದಾಗಿ ಗ್ರಾಮಸ್ಥರೊಬ್ಬರು ಹೇಳಿದ್ದರೆ, ಅಧಿಕಾರಿಗಳು 40 ರಿಂದ 50ರಷ್ಟು ಹೆಣ ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ನಡುವೆ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದ ನಡುವೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿದೆ. ಬಕ್ಸರ್ ನ ಮಹಾದೇವ್ ಘಾಟ್ ಗೆ ಬರುವುದಕ್ಕೂ ಮುನ್ನ ಗಂಗಾ ನದಿಯು ಉತ್ತರ ಪ್ರದೇಶದ ಬಿರ್ ಪುರ್ ಹಾಗೂ ಬರೆಗಾಮ್ ನಗರಗಳ ಮೂಲಕ ಹಾಯ್ದು ಬರುತ್ತದೆ. ಆ ನಂತರವೇ ಮೃತ ದೇಹಗಳು ಮಹಾದೇವ್ ಘಾಟ್ ನ ದಡಕ್ಕೆ ಸೇರುತ್ತಿವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ಉತ್ತರ ಪ್ರದೇಶದ ಯಮುನಾ ನದಿಯಲ್ಲಿಯೂ ಇದೇ ರೀತಿ ಹೆಣಗಳ ರಾಶಿ ಹರಿದು ಬಂದಿತ್ತು. ಸದ್ಯ ಸ್ಥಿತಿಯಲ್ಲಿ ಹೆಣವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದರೆ ಸುಮಾರು ರೂ. 30 ಸಾವಿರದಿಂದ ರೂ. 40 ಸಾವಿರದಷ್ಟು ಖರ್ಚಾಗುತ್ತದೆ. ಹೀಗಾಗಿ ಈ ರೀತಿ ಹೆಣಗಳನ್ನು ಎಸೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.