ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಬಹುನಿರೀಕ್ಷಿತ ಸ್ಥಳೀಯ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
2019ರ ನವೆಂಬರ್ 12 ರಂದು ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನ.14ರಂದು ಮತಗಳ ಎಣಿಕೆ ನಡೆದಿತ್ತು. ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಭಾಜಪ ಅಭ್ಯರ್ಥಿಗಳು ಹಾಗೂ 10 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. ಈ ಮುಂಚೆ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಸಾಮಾನ್ಯ ಮಹಿಳೆಗೆ ಮೀಸಲಾದ ಕಂಪ್ಲಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷದಿಂದ ಜಯ ಗಳಿಸಿರುವ 10 ಮಹಿಳೆಯರು ಅರ್ಹರಿದ್ದರೂ ಸಹಿತ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದ ಮಹಿಳೆ 14ನೇ ವಾರ್ಡಿನಿಂದ ಜಯಗಳಿಸಿರುವ ಶಾಂತಲಾ ವಿ. ವಿದ್ಯಾಧರ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಬಹುಮತ ಪಡೆದಿರುವ ಭಾಜಪದಲ್ಲಿ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಗೆದ್ದಿರುವ ಏಕೈಕ ಮಹಿಳೆ 14ನೇ ವಾರ್ಡಿನ ಶಾಂತಲಾ ವಿ.ವಿದ್ಯಾಧರ. ಆದರೆ ಈ ಪಕ್ಷದಿಂದ ಜಯ ಗಳಿಸಿರುವ ಉಳಿದ ಐವರು ಮಹಿಳಾ ಅಭ್ಯರ್ಥಿಗಳಲ್ಲಿ 11ನೇ ವಾರ್ಡಿನ ಪಾರ್ವತಿ, 19ನೇ ವಾರ್ಡಿನ ಗಂಗಮ್ಮ ಉಡೇಗೋಳ್, 21ನೇ ವಾರ್ಡಿನ ಎಚ್.ಹೇಮಾವತಿ ಎಚ್.ಪಿ. ಚಂದ್ರು ಸಹಿತ ಆಕಾಂಕ್ಷಿಗಳಾಗಿದ್ದಾರೆ.
ಇದೀಗ ಸಾಮಾನ್ಯ ಮಹಿಳಾ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಿರುವುದರಿಂದ ಹಾಗೂ ಬಹುವರ್ಷಗಳ ನಂತರ ವೀರಶೈವ ಲಿಂಗಾಯತ ಧರ್ಮದ ಅಭ್ಯರ್ಥಿ ಇರುವುದರಿಂದ ಇವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದೆನ್ನುವ ಮಾತುಗಳು ಕೇಳಿ ಬರುತ್ತಿರುವುದರ ಜೊತೆಗೆ ಭಾಜಪ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಬಹುತೇಕ ಅಧ್ಯಕ್ಷರಾಗಿ ಆಯ್ಕೆಯಾಗಬಹುದಾಗಿದೆ.
ಇನ್ನು ಕಾಂಗ್ರೆಸ್ ಪಕ್ಷವು 10 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಅದರಲ್ಲಿಯೂ ಅಧ್ಯಕ್ಷ ಆಕಾಂಕ್ಷಿಗಳಿದ್ದು, ಸ್ಥಳೀಯ ಶಾಸಕರು ಕೈಗೊಳ್ಳುವ ನಿರ್ಣಯದ ಮೇಲೆ ಪುರಸಭೆ ಆಡಳಿತ ಚುಕ್ಕಾಣಿ ಯಾರಿಗೆ ಎನ್ನುವುದು ತಿಳಿಯಲಿದೆ. ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲಾಗಿದ್ದು, ಈ ವರ್ಗದಿಂದ ಇಬ್ಬರು ಮುಸ್ಲಿಂ ಪುರುಷರು, ಒಬ್ಬ ಮಹಿಳೆ ಹಾಗೂ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಪುರುಷರು ಆಯ್ಕೆಯಾಗಿದ್ದರೂ ಸಹಿತ ಭಾಜಪ ಬಹುಮತ ಹೊಂದಿರುವುದರಿಂದ ಈ ಪಕ್ಷದ ಕೆ.ನಿರ್ಮಲ ಅಥವಾ ಹೂಗಾರ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಭಾಜಪಕ್ಕೆ ಸಂಪೂರ್ಣ ಬಹುಮತ ಇರುವುದರಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅದೇ ಪಕ್ಷದಿಂದ ಆಗಬಹುದೆನ್ನುವ ಮಾತುಗಳು ಕೇಳಿಬರುತ್ತಿದ್ದರೂ ಸಹಿತ ರಾಜಕಾರಣದಲ್ಲಿ ಏನೂ ಆಗಬಹುದೆನ್ನುವ ಮಾತುಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಆದರೂ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ಪುರಸಭೆ ಮೀಸಲಾತಿ ಪ್ರಕಟ; ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
Advertisement