ವಿಜಯಸಾಕ್ಷಿ ಸುದ್ದಿ, ಗದಗ
ರೈಲು, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರಿದ್ದಾರೆ, ಮೊಬೈಲ್ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಸಂದೇಶಗಳ ಮೂಲಕ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ, ಕಳ್ಳ ಕಾಕಾರ ಮೇಲೆ ನಿಗಾವಹಿಸುವ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಆದರೆ, ರಾತ್ರಿ ಹೊತ್ತು ಗಸ್ತು ತಿರುಗಲು ಕರ್ತವ್ಯದ ಮೇಲೆ ಹೊರಗೆ ಹೋದ ಪೊಲೀಸರೊಬ್ಬರ ಕಪಾಟಿಗೆ (ಟ್ರಜರಿ) ಪೊಲೀಸ್ ಪೇದೆಯೊಬ್ಬ ಕನ್ನ ಹಾಕಿರುವ ಅಪರೂಪದ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೊನ್ನೆ ಅಂದರೆ ಡಿಸೆಂಬರ್ 1 ಬೆಳಗಿನ ಜಾವ ನೈಟ್ ಪಾಳೆಯದಲ್ಲಿದ್ದ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಮಂಜುನಾಥ್ ಎಂಬ ಪೊಲೀಸ್ ಪೇದೆ, ಗದಗ ಗ್ರಾಮೀಣ ಪೊಲೀಸ್ ಠಾಣೆಯ ಟ್ರಜರಿಯಲ್ಲಿ ಇದ್ದ ಸುಮಾರು 45 ಸಾವಿರಕ್ಕೂ ಹೆಚ್ಚಿನ ಹಣ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ಪೊಲೀಸ್ ಠಾಣೆಯ ಕಪಾಟಿನಲ್ಲಿಟ್ಟಿದ್ದ ಹಣ ದೋಚಿದ್ದಾನೆ ಎನ್ನಲಾಗುತ್ತಿರುವ ಪೊಲೀಸ್ ಪೇದೆ ಬುಧವಾರ ರಾತ್ರಿ ಠಾಣೆಯಲ್ಲೆ ಮೂರ್ಛೆರೋಗ ಬಂದು ಬಿದ್ದಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕಳ್ಳ ಕಾಕರಿಂದ ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಕಳ್ಳರಾದರೆ ಹೇಗೆ ಎಂಬ ಭೀತಿ ಸದ್ಯ ಅವಳಿ ನಗರದ ಜನರನ್ನು ಕಾಡುತ್ತಿದೆ.