ಖಾತಾ ಮಾಡಿಕೊಡಲು ಲಂಚ ಬೇಕಂತೆ!?

-ಯಶಸ್ವಿ ಟೌನ್ಶಿಪ್ನ ಕಾನೂನು ಸಲಹೆಗಾರರ ಗಂಭೀರ ಆರೋಪ
-ಕೊಪ್ಪಳ ನಗರಸಭೆಯಿಂದ ವಿನಾಕಾರಣ ವಿಳಂಬ ಧೋರಣೆ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಇಲ್ಲದಿದ್ದರೆ ಅಲೆದಾಟ ತಪ್ಪಿದ್ದಲ್ಲ ಎಂದು ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ನ ಕಾನೂನು ಸಲಹೆಗಾರರಾದ ಶ್ರೀಮತಿ ಸಿ.ಸುನಂದಾ ಆರೋಪಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರದೇಶಗಳಲ್ಲಿ ಕಾನೂನಿನಡಿ ನಾವು ಯಶಸ್ವಿ ಟೌನ್ಶಿಪ್ಗಳು ಅಬಿವೃದ್ಧಿಯಾಗಿವೆ. ವೇಗವಾಗಿ ಬೆಳೆಯುತ್ತಿರುವ ಕೊಪ್ಪಳದಲ್ಲಿ ಮಾದರಿ ಬಡಾವಣೆ ನಿರ್ಮಿಸಬೇಕೆಂಬ ಉದ್ದೇಶದಿಂದ ನಾವು ಯಶಸ್ವಿ ಪವನಸ್ಕರ್ ನಗರವನ್ನು ಅಭಿವೃದ್ಧಿಪಡಿಸಿದ್ದೇವೆ. ಸರಕಾರದ ಎಲ್ಲ ನಿಯಮಾವಳಿಗಳನ್ನು ಪಾಲನೆ ಮಾಡಿ ಕೊಪ್ಪಳದಲ್ಲಿ ಸುಂದರ ಸುಸಜ್ಜಿತ ಬಡಾವಣೆ ನಿರ್ಮಿಸಿದ್ದೇವೆ. ಆದರೆ ನಗರಸಭೆಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆಯಿಂದಾಗಿ ನಮ್ಮ ಗ್ರಾಹಕರಿಗೆ ನಿವೇಶನಗಳ ಖಾತಾ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ನಗರಸಭೆಯ ಆಯುಕ್ತರು ಈ ವಿಷಯದಲ್ಲಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ನಮಗೆ ಈ ರೀತಿ ಮಾಡುತ್ತಿದ್ದಾರೆ ಎಂದು ವಿಚಾರಿಸಿದಾಗ ಅವರ ಬೇಡಿಕೆಗಳನ್ನು ನಾವು ಈಡೇರಿಸಿಲ್ಲ ಎಂಬ ಉತ್ತರ ಅವರ ಬ್ರೋಕರ್ಗಳ ಮೂಲಕ ಬರುತ್ತಿದೆ. ನಿವೇಶನಗಳ ಖಾತಾ ಮಾಡಿಕೊಡುವಂತೆ ನಾವು ನಗರಸಭೆಗೆ ಹಲವು ಬಾರಿ ಅರ್ಜಿ ಕೊಟ್ಟಿದ್ದೇವೆ. ವೈಯಕ್ತಿಕವಾಗಿ ಮನವಿ ಮಾಡಿದ್ದೇವೆ. ಆದರೂ ನಗರಸಭೆ ಸ್ಪಂದಿಸಿಲ್ಲ ಎಂದು ಅವರು ತಿಳಿಸಿದರು.
ಕೆಲವು ದಿನಗಳ ಹಿಂದೆ ಪೌರಾಯುಕ್ತರ ಹೆಸರು ಹೇಳಿಕೊಂಡು ಬಂದ ಅರಗಂಜಿ ಹೆಸರಿನ ಮಧ್ಯವರ್ತಿಯೊಬ್ಬ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಅದೂ ತಮ್ಮ ಪಾಲಿನ ಹಣ. ಪೌರಾಯುಕ್ತರ ಪಾಲಿನದ್ದನ್ನು ಅವರ ಜೊತೆ ಮಾತನಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ನಾವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಲಂಚ ಕೊಡುವುದು, ತೆಗೆದುಕೊಳ್ಳುವುದು ಅಪರಾಧ ಎಂಬ ಭಾವನೆ ಹೊಂದಿದವರೆಂದು ನೇರವಾಗಿ ಹೇಳಿ ಕಳಿಸಿದ್ದೇವೆ. ಈ ಕುರಿತು ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು.
ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ ಅವರ ಬಗ್ಗೆ ನಮಗೆ ಪೂರ್ವಗ್ರಹವಿಲ್ಲ. ಅವರ ಹೆಸರು ಹೇಳಿಕೊಂಡು ಬಂದ ಮಧ್ಯವರ್ತಿಯನ್ನ ಅವರೇ ಕಳಿಸಿದ್ದಾ? ಇಲ್ಲವಾ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಒಂದೊಮ್ಮೆ ಅವರು ಪ್ರಾಮಾಣಿಕವಾಗಿದ್ದರೆ ಸರಕಾರದ ನಿಯಮನುಸಾರ ನಿಗದಿತ ಅವಧಿಯೊಳಗೆ ಖಾತಾ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಮನವಿಯ ಹಲವು ಪ್ರಯತ್ನಗಳು ವಿಫಲವಾದ ಬಳಿಕ ನಗರಸಭೆಯ ಭ್ರಷ್ಟಾಚಾರದ ವಿರುದ್ಧ ಡಿಸಿಯವರಿಗೆ ಹಾಗೂ ಎಸ್ಪಿಯವರಿಗೆ ದೂರು ನೀಡಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ನಾವು ಕೈ ಬಿಡುವುದಿಲ್ಲ. ನಗರಸಭೆಯ ಆಡಳಿತದ ವಿರುದ್ಧ ನ್ಯಾಯಾಂಗ ಹೋರಾಟಕ್ಕೂ ಸಿದ್ಧವಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈ. ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಮತ್ತಿತರರು ಇದ್ದರು.
ವಿಳಂಬ ನಗರಸಭೆ ಕಾರಣವಲ್ಲ:
ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ನ ನಿವೇಶನಗಳ ಖಾತಾ ಮಾಡಿಕೊಡಲು ತಡವಾಗುತ್ತಿರುವುದಕ್ಕೆ ಅವರ ಲೇಔಟ್ನ ನ್ಯೂನ್ಯತೆಗಳೇ ಕಾರಣವೇ ಹೊರತು ನಗರಸಭೆಯಲ್ಲ. ಉದ್ಯಾನವನದಲ್ಲಿ ಯುಜಿಡಿಯ ಸೆಪ್ಟಿಕ್ ಟ್ಯಾಂಕ್ ಕಟ್ಟಿದ್ದು ಒಂದು ಕಾರಣವಾದರೆ, ರೇರಾ ಅನುಮೋದನೆ ಪಡೆಯದಿರುವುದು, ಫ್ಲೋರೆಟಾ ಶುಲ್ಕ ಕಟ್ಟದಿರುವುದು ಸೇರಿದಂತೆ ನಾನಾ ಕಾರಣಗಳಿವೆ. ಅವುಗಳಿಗೆಲ್ಲ ಪರಿಶೀಲನೆ ಹಂತದಲ್ಲಿವೆ. ವೃಥಾ ಆರೋಪ ಸರಿಯಲ್ಲ.
ಲತಾ ಗವಿಸಿದ್ಧಪ್ಪ ಚಿನ್ನೂರು, ಅಧ್ಯಕ್ಷೆ, ನಗರಸಭೆ, ಕೊಪ್ಪಳ.
ಪರಿಶೀಲನೆ ಕಾರ್ಯ ಮುಗಿದಿಲ್ಲ; ತಕ್ಷಣವೇ ಬೇಕಂದ್ರೆ ಹೇಗೆ?:
ಈ ಬಗ್ಗೆ ಈಚೆಗಷ್ಟೇ ನಗರಸಭೆಯ ಸದಸ್ಯರ ಸಭೆಯಲ್ಲಿ ಚರ್ಚಿಸಲಾಗಿದೆ. ಇದಕ್ಕಾಗಿ ಸಮಿತಿ ರಚಿಸಲಾಗಿದ್ದು, ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸಮಿತಿಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು. ತಕ್ಷಣವೇ ಖಾತಾ ಮಾಡಿ ಕೊಡಿ ಎಂದರೆ ಹೇಗೆ? ಕಾನೂನು, ನಿಯಮಗಳನ್ನು ಮೀರಿ ಕೆಲಸ ಮಾಡಲಾಗಲ್ಲ. ಯಶಸ್ವಿ ಟೌನ್ಶಿಪ್ನವರು ಮಾಡಿರುವ ಎಲ್ಲ ಆರೋಪಗಳು ಶುದ್ಧ ಸುಳ್ಳು.
–ರಮೇಶ್ ಬಡಿಗೇರ, ಪೌರಾಯುಕ್ತರು, ನಗರಸಭೆ, ಕೊಪ್ಪಳ.
ಕುಂಟು ನೆಪ ಹೇಳುತ್ತಿದ್ದಾರಷ್ಟೇ:
ಸೆಪ್ಟಿಕ್ ಟ್ಯಾಂಕ್ ಕಟ್ಟಿರುವುದು ನಿಜ. ಯುಜಿಡಿಯ ನೀರನ್ನು ಶುದ್ಧೀಕರಿಸಿ ಉದ್ಯಾನವನಕ್ಕೆ ಬಳಸುವ ಮುಂದಾಲೋಚನೆಯಿಂದ ಕಟ್ಟಲಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಪ್ರಾಧಿಕಾರ ಕ್ಲಿಯರೆನ್ಸ್ ನೀಡಿದೆ. ರೇರಾ ಅನುಮೋದನೆ ಪಡೆದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಪ್ರೋರೆಂಟಾ ಶುಲ್ಕವನ್ನು ನಗರಸಭೆಗೆ ಯಾಕೆ ಕಟ್ಟಬೇಕು? ಇವೆಲ್ಲ ಕುಂಟುನೆಪಗಳಷ್ಟೇ.
-ಸಿ.ಸುನಂದಾ, ಕಾನೂನು ಸಲಹೆಗಾರರು, ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈ.ಲಿ.