ವಿಜಯಸಾಕ್ಷಿ ಸುದ್ದಿ, ಗದಗ:
ನಾವು ಎಲ್ಲಿಯವರೆಗೂ ಮೋಸ ಹೋಗುತ್ತಿರುತ್ತೇವೆಯೋ, ಅಲ್ಲಿಯವರೆಗೆ ಮೋಸಮಾಡುವವರೂ ಇರುತ್ತಾರೆ ನೋಡಿ. ಆದರೆ, ಮೋಸಗಾರರ ವರಸೆಗಳೂ ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಇಂದಿನ ದಿನಮಾನದಲ್ಲಿ ಸೈಬರ್ ಕ್ರೈ ಸಂಬಂಧಿತ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿರುವದು ಇದಕ್ಕೆ ಸಾಕ್ಷಿ. ಎಲ್ಲೋ ದೂರದ ಮುಂಬೈ, ದೆಹಲಿ, ಬೆಂಗಳೂರುಗಳಂಥಹ ಮಹಾನಗರಗಳಲ್ಲೇ ಹೆಚ್ಚೆಚ್ಚು ನಡೆಯುತ್ತಿದ್ದ ಇಂಥ ಸೈಬರ್ ವಂಚನೆಗಳು ಇಂದು ನಮ್ಮದೇ ಜಿಲ್ಲೆ, ತಾಲೂಕುಗಳಲ್ಲಿಯೂ ನಡೆಯತೊಡಗಿರುವದರಿಂದ ಜನಸಾಮಾನ್ಯರೂ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸುಳ್ಳಲ್ಲ.
ಅಂಥದೊಂದು ಪ್ರಕರಣ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಿವಾಸಿ, ಹಾಶಮಸಾಬ್ ಮಹಮದಗೌಸ್ ಖುದಾವಂದ್ ಮೋಸಕ್ಕೊಳಗಾದ ವ್ಯಕ್ತಿಯಾಗಿದ್ದಾರೆ. ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದ ಬಳಿ ಈ ಘಟನೆ ಆಗಿದೆ ಎನ್ನಲಾಗಿದೆ.
2021ರ ಅಕ್ಟೋಬರ್ 24ರಂದು ಹಾಶಮಸಾಹೇಬರ ಮೊಬೈಲ್ ಸಂಖ್ಯೆಗೆ ಕರೆಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕಾಗಿದೆ. ತಕ್ಷಣ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ ಎಂಬರ್ಥದ ಮೆಸೇಜ್ ಕಳುಹಿಸಿ ಲಿಂಕನ್ನೂ ಕೂಡ ನೀಡಿದ್ದ. ಈ ಬಗ್ಗೆ ಗೊಂದಲಕ್ಕೊಳಗಾದ ಹಾಶಮಸಾಬ್ ಲಿಂಕ್ ಒತ್ತಿ ಅಲ್ಲಿ ಕೇಳಿದ ಎಲ್ಲ ಮಾಹಿತಿಯನ್ನೂ ತುಂಬಿದ್ದಾರೆ ಎನ್ನಲಾಗಿದೆ. ಹೀಗೆ ಲಿಂಕ್ ಮೂಲಕ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಹಂತಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ರೂ.6,98,675ಗಳನ್ನು ಗೊತ್ತಾಗದಂತೆ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ.
ವಿಷಯ ಗೊತ್ತಾಗುತ್ತಿದ್ದಂತೆ ದಿಗಿಲಿಗೊಳಗಾದ ಹಾಶಮ್ ಸಾಹೇಬ್ ಮೆಸೇಜ್ ಕಳಿಸಿದ್ದ ಮೊಬೈಲ್ ನಂಬರ್ ನ್ನು ಸಂಪರ್ಕಿಸಿ ಹೇಗೋ 2 ಲಕ್ಷ.ರೂ.ಗಳನ್ನು ವಾಪಸ್ ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿರುವದಾಗಿ ತಿಳಿದುಬಂದಿದೆ. ಉಳಿದ ಹಣವೂ ಖಾತೆಗೆ ಮರಳಬಹುದು ಎಂದು ಇಲ್ಲಿಯವರೆಗೂ ಕಾಯ್ದ ಹಾಸಮಸಾಹೇಬ್ ಹಣ ಮರಳಿ ಸಿಗದಿರುವ ಕುರಿತು ಇದೀಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.