ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ.
ಇದೇ ತಿಂಗಳ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಮುಂದೂಡಲಾಗಿದೆ. ಈ ಕುರಿತು ಅಧಕೃತವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಅಲ್ಲದೆ ಪ್ರಥಮ ಪಿಯು ಪರೀಕ್ಷೆಗಳನ್ನು ಕೂಡ ರದ್ದು ಮಾಡಲಾಗಿದ್ದು ಪ್ರಥಮ ಪಿಯು ವಿದ್ಯಾರ್ಥಿಗಳೆಲ್ಲರನ್ನೂ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಅವರು, ಪಿಯುಸಿ ಪರೀಕ್ಷೆ ಪ್ರಾರಂಭಿಸುವ 20 ದಿನಗಳೊಳಗಿ ದಿನಾಂಕ ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳು ಯಾವ ಕಾರಣಕ್ಕೂ ವಿಚಲಿತರಾಗದೆ ಅಭ್ಯಾಸ ಮುಂದುವರಿಸಬೇಕು ಎಂದು ಹೇಳಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮುನ್ನ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತದೆ. ಇದರೊಂದಿಗೆ ಇಲಾಖೆಯ ಯೂಟ್ಯೂಬ್ ಚಾನಲ್ ಮೂಲಕ ಬ್ರಿಡ್ಜ್ ಕೋರ್ಸ್ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪರೀಕ್ಷೆ ಮುಂದೂಡಿದ ಕಾರಣದಿಂದ ವಿದ್ಯಾರ್ಥಿಗಳೊಡನೆ ಸತತ ಸಂಪರ್ಕದಲ್ಲಿದ್ದು, ಉಪನ್ಯಾಸಕರು ವರ್ಕ್ ಫ್ರಮ್ ಹೋಮ್ ಮಾಡಬೇಕೆಂದು ಸಚಿವರು ಸೂಚಿಸಿದ್ದಾರೆ.