ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಸುಗಳ ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ ನಡೆಸದೆ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂತಹ ಗೋ ರಕ್ಷಣೆಯಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅವರು, ಗೋ
ರಕ್ಷಣೆ ಕುರಿತು ಬಿಜೆಪಿ ಬೀದಿ ಬೀದಿಯಲ್ಲಿ ಅರಚುತ್ತಲೇ ಇದೆ. ಆದರೆ, ಇವರದು ಕೇವಲ ಮಾತು, ಗೋವುಗಳ ರಕ್ಷಣೆ ಅಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹಣೆ ಇದೆ.
ಹಸುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ಇದನ್ನು ರಾಜ್ಯ ಸರ್ಕಾರವೂ ಕೇಳಿಲ್ಲ. ಹೀಗಾಗಿ ರಾಸುಗಳು ಅನಾರೋಗ್ಯದಿಂದ ನರಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲುಬಾಯಿ ಜ್ವರ ಭೀಕರ ಕಾಯಿಲೆಯಾಗಿದೆ. ಈ ರೋಗ ಉಲ್ಭಣಗೊಂಡರೆ ಪ್ರಾಣಿಗಳು ನರಳಾಡಿ ಸಾಯುತ್ತವೆ. ಗೋವುಗಳ ಪಾಡು ನೋಡಲಾಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸದ್ಯ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕಾಣುತ್ತಿದೆ. ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸದಿರುವುದಕ್ಕೆ ಇದೆ ಕಾರಣ ಎಂಬ ಅಂಶ ಬಯಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಈ ಅಭಿಯಾನ ಕೈಗೊಂಡಿಲ್ಲ ಎಂದು ಪಶು ವೈದ್ಯರು ಹೇಳಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಬೇಕು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಇದರಿಂದ ಎಚ್ಚೆತ್ತ ಸರ್ಕಾರ ಕೂಡ ಪರಿಹಾರ ನೀಡಿತ್ತು. ಈಗಲೂ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.