ಪ್ರೀತಿಯ ಪಾರಿವಾಳ ಕಳುವಾತ ಗೆಳೆಯ…! ಆರ್‌ಎಕ್ಸ್, ಸೂರಿ, ಮಾರಿ ಎಲ್ಲವೂ ಚೋರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಆ ಇಬ್ಬರಿಗೂ ಈ ಜಗತ್ತು ಹೊಸದು. ಹುಟ್ಟಿ ೨೦ ರಿಂದ ೨೫ ದಿನಗಳಾಗಿವೆ ಅಷ್ಟೇ. ಹಸಿವು ಆದರೆ ತಿನ್ನಲು ಬಾರದು. ನೀರಡಿಕೆಯಾದರೆ ಕುಡಿಯಲು ಗೊತ್ತಿಲ್ಲ. ಈ ಇಬ್ಬರ ಹಸಿವು, ನೀರಡಿಕೆ ಗೊತ್ತಾಗುವುದು ತಂದೆ-ತಾಯಿಗೆ ಮಾತ್ರ. ಆದರೆ ಅವರೇ ಇಲ್ಲ. ಕಳ್ಳರ ಕೈ ಚಳಕದಿಂದ ಇವರಿಬ್ಬರು ಅನಾಥರಾಗಿದ್ದಾರೆ !
ಇದು ಯಾವುದೊ ಕಟ್ಟು ಕಥೆಯಲ್ಲ, ಕ್ರೈಂ ಸ್ಟೋರಿ ಅಂತು ಅಲ್ಲವೇ ಅಲ್ಲ. ಇದೊಂದು ಪಾರಿವಾಳ ಮರಿಗಳ ಮನಮಿಡಿಯುವ ಕಣ್ಣೀರ ಕಥೆ.

ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಜೂನ್ 15 ಮಂಗಳವಾರ ಪಾರಿವಾಳದ ಗೂಡಿಗೆ (ಪೆಟ್ಟಿಗೆಗೆ) ಕಳ್ಳರ ವಕ್ರದೃಷ್ಟಿ ಬಿದ್ದಿದೆ. ಪ್ರೀತಿಯಿಂದ ಹೆಸರಿಟ್ಟಿದ್ದ ಆರ್‌ಎಕ್ಸ್, ಸೂರಿ, ಮಾರಿ ಹಾಗೂ ಗಿಡ್ಡ ಎನ್ನವ ಅತಿ ಮುದ್ದಿನ ಪಾರಿವಾಳಗಳ ಜೊತೆಗೆ 25 ಪಾರಿವಾಳಗಳನ್ನು ಖದೀಮರು ಕದ್ದೊಯ್ದಿದ್ದಾರೆ.

ಜೂನ್ 16 ಬುಧವಾರ ಬೆಳಿಗ್ಗೆ ಪಾರಿವಾಳ ಕಳ್ಳತನ ವಿಷಯ ಬೆಳಕಿಗೆ ಬಂದಿದೆ. ಪಾರಿವಾಳಗಳ ಮಾಲೀಕ ಕಿರಣ ಕಟ್ಟಿಮನಿ ತನ್ನ ಮೆಚ್ಚಿನ ಪಾರಿವಾಳಗಳು ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕಿದ ಪಾರಿವಾಳ ಕಳ್ಳತನವಾಗಿದ್ದಕ್ಕೆ ಸಹಜವಾಗಿ ಬೇಸರಗೊಂಡಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚು ದುಃಖಿತರಾಗಿದ್ದು ಎರಡು ಪಾರಿವಾಳ ಮರಿಗಳು ಅನಾಥವಾಗಿದ್ದಕ್ಕೆ. ಬೇರೆ ಬೇರೆಯ ಜೋಡಿ ಈ ಎರಡು ಪಾರಿವಾಳ ಮರಿಗಳು ಈಗ ಅನಾಥವಾಗಿದ್ದಕ್ಕೆ ಕಿರಣ ಕಟ್ಟಿಮನಿ ಮಮ್ಮಲ ಮರಗುತ್ತಿದ್ದಾರೆ.

ತಂದೆ-ತಾಯಿಯ ಗುಟ್ಟಿಯಿಂದ ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದ ಆ ಎರಡೂ ಮರಿಗಳಿಗೆ ಈಗ ಕಿರಣ ಕಷ್ಟ ಪಟ್ಟು ಆಹಾರ ನೀಡುತ್ತಿದ್ದಾರೆ. ಕಾಡಪುಡಿ ಜಾತಿಗೆ ಸೇರಿರುವ ಈ ಪಾರಿವಾಳಗಳನ್ನು ಇನ್ನೂ ಇಂದು ತಿಂಗಳು ಕಾಲ ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲುಹಿ ದೊಡ್ಡದಾಗಿ ಬೆಳಸುವ ಹೊಣೆಗಾರಿಕೆ ಹೊತ್ತಿದ್ದಾರೆ.

ಕಿರಣ ಕಟ್ಟಿಮನಿ ಗದಗನ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿ. ಪಾರಿವಾಳಗಳೆಂದರೆ ಎಲ್ಲಿಲ್ಲದ ಪ್ರೀತಿ. ಕಳೆದ 20 ವರ್ಷಗಳಿಂದ ಪಾರಿವಾಳಗಳನ್ನು ಸಾಕುವುದು, ಆರೈಕೆ ಮಾಡುವುದರಲ್ಲಿ ನಿಸ್ಸೀಮರು. ತಮಗೆ ಇಷ್ಟವಾದ ಪಾರಿವಾಳಗಳನ್ನು ಎಷ್ಟೆ ದುಡ್ಡು ಖರ್ಚು ಆದರೂ ಪರವಾಗಿಲ್ಲ ಅವುಗಳನ್ನು ಕೊಂಡು ಸಾಕುತ್ತಿದ್ದರು. ಎರಡು ತಿಂಗಳ ಹಿಂದೆ 10 ಸಾವಿರ ರೂ. ಖರ್ಚು ಮಾಡಿ ಬಿಜಾಪೂರದಿಂದ ಎರಡು ಪಾರಿವಾಳಗಳನ್ನು ತಂದಿದ್ದರು. ಕಳ್ಳತನವಾದ ಪರಿವಾಳಗಲ್ಲಿ ಇವು ಸೇರಿವೆ.

ವಾರದ ಹಿಂದೆ ಕೆಲವರು ಪಾರಿವಾಳಗಳನ್ನು ಮಾರಾಟಕ್ಕೆ ಕೇಳಿದ್ದರು. ಆದರೆ ಕಿರಣ ಕೊಟ್ಟಿರಲಿಲ್ಲ. ಆದರೆ ಈಗ ಕಳ್ಳತನವಾಗಿವೆ. ಕಳ್ಳತನವಾದ ಸುದ್ದಿ ಕೇಳಿದ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪಾರಿವಾಳಗಳನ್ನು ಕದ್ದ ಖದೀಮರಿಗೆ ಗ್ರಾಮೀಣ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.

ಲಕ್ಷ ರೂಪಾಯಿ ಖರ್ಚು ಮಾಡಿ ಪಾರಿವಾಳ ಸಾಕಿದ್ದೀ. ಮಂಗಳವಾರ ರಾತ್ರಿ ಮಲಗಲು ಹೋಗಿರಲಿಲ್ಲ. ಆದರೆ ಯಾರೋ ನನ್ನ ಪಾರಿವಾಳಗಳನ್ನು ಕದ್ದಿದ್ದಾರೆ. ಕದ್ದಿದ್ದಕ್ಕೆ ಬೇಜಾರಿಲ್ಲ. ಆದರೆ ಎರಡು ಮರಿ ಪಾರಿವಾಳ ಹಾಗೆ ಬಿಟ್ಟು ಹೋಗಿದ್ದಕ್ಕೆ ಬೇಜಾರಾಗಿದೆ. ಆ ಮರಿಗಳನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಕಿರಣ ಕಟ್ಟಿಮನಿ, ಪಾರಿವಾಳ ಕಳೆದುಕೊಂಡ ವ್ಯಕ್ತಿ.


Spread the love

LEAVE A REPLY

Please enter your comment!
Please enter your name here