ವಿಜಯಸಾಕ್ಷಿ ಸುದ್ದಿ, ಗದಗ:
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21 ನೇ ಸಾಲಿನಲ್ಲಿ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ನಂದಿವೇರಿಮಠದ ಮಾಲೀಕತ್ವದಲ್ಲಿರುವ ಒಟ್ಟು 14.51 ಹೇ. ಜಮೀನಿಗೆ ನಿಜಲಿಂಗಪ್ಪ ಕೆ. ಆಲೂರ ಎಂಬುವವರು ಅಕ್ರಮವಾಗಿ ತಮ್ಮ ಹೆಸರಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡು ಅಂದಾಜು ರೂ. 542115/- ಸರ್ಕಾರದ / ವಿಮಾ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ತನಿಖೆಯಿಂದ ತಿಳಿದು ಬಂದಿರುತ್ತದೆ. ಆದ ಕಾರಣ ನಿಜಲಿಂಗಪ್ಪ ಕೆ. ಆಲೂರ ಎಂಬುವವರ ಮೇಲೆ ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರು ಪೋಲೀಸ್ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಕುರಿತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.
ಆದ್ದರಿಂದ ಜಿಲ್ಲೆಯ ರೈತ ಬಾಂಧವರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ದುರುಪಯೋಗ ಆಗುತ್ತಿರುವ ಕುರಿತು ಹಾಗೂ ತಮ್ಮ ಜಮೀನಿನ ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳದಂತೆ ಎಚ್ಚರವಹಿಸಬೇಕೆಂದು ಪ್ರಭಾರಿ ಜಂಟಿ ಕೃಷಿ ನಿರ್ದೇಶಕರಾದ ವೀರೇಶ ಹುನಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.