ವಿಜಯಸಾಕ್ಷಿ ಸುದ್ದಿ, ಕೊಟ್ಟೂರು
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಫುಟ್ಪಾತನ್ನು ಆಕ್ರಮಿಸಿಕೊಂಡು ಅಂಗಡಿಗಳನ್ನಿಟ್ಟುಕೊಂಡವರು ಸೋಮವಾರದೊಳಗೆ ತೆರವುಗೊಳಿಸುವಂತೆ ತಹಸೀಲ್ದಾರ್ ಜಿ. ಅನಿಲ್ ಕುಮಾರ್ ಸೂಚಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಛೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಎಪಿಎಂಸಿ ರಸ್ತೆ, ಸರ್ಕಾರಿ ಬಸ್ ನಿಲ್ದಾಣ, ಗಾಂಧಿ ಸರ್ಕಲ್ ಮುಂಭಾಗ, ಇಟಗಿ ರಸ್ತೆ, ಉಜ್ಜಿನಿ ಸರ್ಕಲ್ ನ ಚಿರಬಿ ರಸ್ತೆ ಸೇರಿದಂತೆ ಫುಟ್ ಪಾತ್ ಅಕ್ರಮಿಸಿಕೊಂಡು ಡಬ್ಬಾ ಅಂಗಡಿ, ಸ್ಟಾಲ್ ಗಳನ್ನು ನಿರ್ಮಿಸಿಕೊಂಡವರು ಸೋಮವಾರದೊಳಗೆ ತೆರವುಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದು, ಅತಿಕ್ರಮಣ ಮಾಡಿಕೊಂಡ ರಸ್ತೆಗಳನ್ನು ತೆರವುಗೊಳಿಸದಿದ್ದರೆ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತಕ್ಷಣ ಈ ಅಂಗಡಿಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಜೆಸ್ಕಾಂ ಇಂಜಿನಿಯರ್ ಎಸ್. ಚೇತನ್ ಕುಮಾರ್ ಗೆ ಆದೇಶಿಸಿದರು. ಪೊಲೀಸ್, ಅಗ್ನಿ ಶಾಮಕ ದಳ, ಕಂದಾಯ, ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಜೆಸಿಬಿ, ಕ್ರೈನ್ ಮೂಲಕ ಅತಿಕ್ರಮಣ ತೆರವುಗೊಳಿಸುವುದಾಗಿ ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಮಾತನಾಡಿ, ಕೊಟ್ಟೂರು ಐತಿಹಾಸಿಕವಾದ ಧಾರ್ಮಿಕ ಕ್ಷೇತ್ರವಾಗಿದೆ. ಪಟ್ಟಣವನ್ನು ಸ್ಚಚ್ಚವಾಗಿ ಇಟ್ಟುಕೊಳ್ಳಬೇಕು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ. ನಾನು ಈಗಾಗಲೇ ವರ್ಗಾವಣೆ ಆದರೂ ಚಿಂತೆ ಇಲ್ಲ. ತೆರವು ಕಾರ್ಯಚರಣೆ ನಿಲ್ಲಿಸುವುದಿಲ್ಲವೆಂದು ಖಡಕ್ಕಾಗಿ ಹೇಳಿದರು.
ಸಭೆಯಲ್ಲಿ ಎಎಸ್ ಐ ರುದ್ರಮುನಿ, ಲೋಕೋಪಯೋಗಿ ಇಲಾಖೆ ಖಾಜಸಾಹೇಬ್, ಆರೋಗ್ಯ ಕಿರಿಯ ಸಹಾಯಕಿ ಅನುಷಾ, ಅಗ್ನಿಶಾಮಕದಳದ ವಾಸುದೇವಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ವ್ಯಾಪಾರಿಗಳು ಸಭೆಯಲ್ಲಿ ಹಾಜರಿದ್ದರು.