ವಿಜಯಸಾಕ್ಷಿ ಸುದ್ದಿ, ಕಾರವಾರ
ಪತ್ನಿ ಮೊಬೈಲ್ ನಲ್ಲಿಯೇ ಮಾತನಾಡುತ್ತ ಹೆಚ್ಚು ಕಾಲ ಕಳೆಯುತ್ತಿದ್ದಕ್ಕೆ ಬುದ್ಧಿ ಹೇಳಿದ್ದಕ್ಕೆ ಸುಫಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಪತಿಯನ್ನೇ ಕೊಲ್ಲಲು ರೂ. 30 ಸಾವಿರಕ್ಕೆ ಸುಫಾರಿ ನೀಡಿ ಈಗ ಹೆಂಡತಿ ಸಿಕ್ಕು ಬಿದಿದ್ದಾರೆ.
ಸರಸ್ವತಿ ಸುತಾರ ಎಂಬ ಮಹಿಳೆಯೇ ಈ ಕೃತ್ಯ ಎಸಗಿದ್ದವಳು. ಈ ಮಹಿಳೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬ ವ್ಯಕ್ತಿಯೊಂದಿಗೆ ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯುವುದಕ್ಕಾಗಿ ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು.
ಆದರೆ, ಮಡದಿಯ ವರ್ತನೆಯಿಂದ ಪತಿ, ಮೊಬೈಲ್ ನಲ್ಲಿ ಹರಟದಂತೆ ಬುದ್ದಿ ಹೇಳಿದ್ದರು. ಇದರಿಂದ ಕೆಂಡಾಮಂಡಲವಾದ ಪತ್ನಿ, ಪರಿಚಯದ ಗಣೇಶ ಶಾಂತರಾಂ ಎಂಬುವವನಿಗೆ ರೂ. 30 ಸಾವಿರ ಕೊಟ್ಟು ಹತ್ಯೆ ಮಾಡುವಂತೆ ಸುಫಾರಿ ಕೊಟ್ಟಿದ್ದಾಳೆ ಎನ್ನಲಾಗಿದೆ.
ಸುಫಾರಿ ಪಡೆದ ಗಣೇಶ ಶಾಂತರಾಂ ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಮನೆಗೆ ಆಗಮಿಸಿ, ಅಂಕುಷ ರಾಮಾ ಸುತಾರ ಅವರ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಆಗ ಅಂಕುಷ ಕೂಗಾಟ ನಡೆಸಿದ್ದಾರೆ. ಕೂಡಲೇ ಪಕ್ಕದ ಮನೆಯಲ್ಲಿದ್ದ ಸಹೋದರರು ಓಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಸಿಕ್ಕಿಬಿದ್ದಿದ್ದಾನೆ.
ಈ ಕುರಿತು ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.