ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಪಟ್ಟಣದ ಅರ್ಬಾಣ, ಹಗೇದಕಟ್ಟಿ, ಕಸಬಾ, ಜಗದ ಓಣಿ, ಸಿದವಿನಬಾವಿ ಓಣಿ ಮತ್ತು ಟಿಎಂಸಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಳೆದ ಎರಡು ತಿಂಗಳಿನಿಂದ ಅಂರ್ತಜಲ ಕುಸಿತದಿಂದ ದೊಡ್ಡ ಕಂದಕಗಳು ಉಂಟಾಗಿ ಜನಜೀವನ ಭಯ ಪಡುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ಕಳೆದ ಐದಾರು ವರ್ಷಗಳಿಂದ ಪದೇಪದೇ ಇಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ಆ ಕಾಲದ ಬಂಡಾಯವೇ ಮಾಯವಾಗಿರುವ ಈ ಹೊತ್ತಿನಲ್ಲಿ ಜನರಿಗೂ ಇದು ದೊಡ್ಡ ಸಮಸ್ಯೆ ಎನಿಸಿಲ್ಲವೊ ಅಥವಾ ಇಲ್ಲಿನ ಶಾಸಕರ ಗೌಡಿಕಿ ಆ ಜನಧ್ವನಿಯನ್ನು ಹತ್ತಿಕ್ಕುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇಲ್ಲಿ ಭೂಕುಸಿತ ಸಹಜ ಎಂಬಂತೆ ಜನಜೀವನ ಸಾಗಿದೆ, ಭಯದಲ್ಲಿ, ಆತಂಕದಲ್ಲಿ!
ಪಟ್ಟಣದ ಟಿಎಂಸಿ ರಸ್ತೆ ಬದುವಿನಲ್ಲಿರುವ ಶಿವಪ್ಪ ನೀಲವಾಣಿ ಅವರ ಮನೆ ಎದುರು ಸೆ. 12ರಂದು ಆಳವಾದ ಗುಂಡಿ ಬಿದ್ದಿದೆ. 2019ರಲ್ಲಿ ಕೆಲ ತಿಂಗಳು ಈ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಪುನ: 2020ರಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಾರಣ ನಿಖರ ಮಾಹಿತಿ ಇನ್ನೂ ತಿಳಿದಿಲ್ಲ.
ಈ ಮಾಹಿತಿ ಅಗೆದು ಬಗೆದು ಶೋಧಿಸಲೆಂದೇ ಇಲ್ಲಿನ ಶಾಸಕರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಸಿ. ಪಾಟೀಲರು ತಮ್ಮದೇ ಉಸ್ತುವಾರಿಯಲ್ಲಿರುವ ಗಣಿ ಇಲಾಖೆಯ ಭೂಗರ್ಭ ತಜ್ಞರ ಒಂದು ಪಡೆ ಕರೆಸಿದ್ದರು. ಅವರೊಂದಿಷ್ಟು ಮಣ್ಣು ಕಲೆ ಹಾಕಿಕೊಂಡು ಹೋದವರು ಪತ್ತೆನೇ ಇಲ್ಲ. ಅವರು ವರದಿ ಬರೆದರೋ ಇಲ್ಲವೋ ದೇವರೇ ಬಲ್ಲ.
ಈ ‘ಅಪೂರ್ವ’ ಅಧ್ಯಯನಕ್ಕೂ ಮೊದಲು ಹಿಂದಿನ ಶಾಸಕರ ಅವಧಿಯಲ್ಲೂ ಕೆಲವು ಅಧ್ಯಯನ ನಡೆದಿವೆ. 2019ರಿಂದ ಇದುವರೆಗೂ ನಾಲ್ಕಾರು ಭಾರಿ ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ಮಾಢಿ ಕೆಲ ‘ಉಪಯುಕ್ತ’ ಕಲ್ಲು, ಮಣ್ಣು ಮತ್ತು ಇತರ ಪರಿಕರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎರಡು ತಿಂಗಳಿನಲ್ಲಿ ಈ ಮಾಹಿತಿ ಅಧ್ಯಯನ ಮಾಢಿ ವರದಿ ನೀಡುವುದಾಗಿ ಪುರಸಭೆಗೆ ತಿಳಿಸಿ ಹೋದ ಭೂಗರ್ಭ ತಜ್ಞರು ಮುಂದೆ ಸುದ್ದಿನೇ ಇಲ್ಲ. ಕೆಲವರು ಗುಡ್ಡದ ಬದಿಯಲ್ಲಿಯ ಕುಡಿಯುವ ನೀರಿನ ಕೆರೆ ನೀರು ತೆಗೆಸಲು ತಿಳಿಸಿದ್ದರು.
ಅದರಂತೆ ಪುರಸಭೆ ಆಡಳಿತ ಮಂಡಳಿ ನೀರು ತೆಗೆಸಿದ್ದು ಆಯಿತು. ಆದರೆ ಭೂಕುಸಿತ ನಿಲ್ಲುತಿಲ್ಲ. ಆಗಾಗ ಕಂದಕಗಳು ಉಂಟಾಗುತ್ತಲೇ ಇವೆ.
ಕಂದಕ ಉಂಟಾದ ಜಾಗೆಯಲ್ಲಿ ಅನೇಕ ಟ್ರ್ಯಾಕ್ಟರ್ ಗಳು ಮತ್ತು ಚಕ್ಕಡಿಗಳು ಸಿಲುಕಿದ್ದಲ್ಲದೇ ಜನತೆಯೂ ತೆಗ್ಗಿನಲ್ಲಿ ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕುರುಬಗೇರಿ ಓಣೆಯ ಶಾಲಾ ವಿದ್ಯಾರ್ಥಿನಿಯೊಬ್ಬಳು ಕಂದಕದಲ್ಲಿ ಬಿದ್ದು ಪ್ರಾಣಾಪಾಯದಿಂದ ಹೊರಬಂದಿದ್ದಾಳೆ.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಭೂಗರ್ಭ ಶಾಸ್ತ್ರಜ್ಞರು ಭೂ ಕುಸಿತದ ಪರಿಣಾವೇನು, ಏತಕ್ಕೆ ಹೀಗಾಗುತ್ತಿದೆ ಎಂಬುದರ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿ ಇದುವರೆಗೂ ನೀಡಿಲ್ಲವೆಂಧು ಪತ್ರಿಕೆಗೆ ತಿಳಿಸಿದ್ದಾರೆ.
ಸಾವು-ನೋವು ಸಂಭವಿಸಿದ ನಂತರವಷ್ಟೇ ಆಡಳಿತಕ್ಕೆ ಎಚ್ಚರವಾಗುತ್ತದೆ ಎಂದು ಕಾಣುತ್ತದೆ.