ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚೆನ್ನೈ/ಬೆಂಗಳೂರು/ನವದೆಹಲಿ: ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ದಿ. ಜಯಲಲಿತಾರ ಆಪ್ತ ಗೆಳತಿ ಶಶಿಕಲಾರನ್ನು ಸನ್ನಡತೆಯ ಆಧಾರದ ಮೇಲೆ ನಾಲ್ಕು ತಿಂಗಳು ಮೊದಲೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ವಾರೊಪ್ಪತ್ತಿನಲ್ಲಿ ಅವರು ಹೊರಗೆ ಬರುತ್ತಿದ್ದಾರೆ.
ಎಐಡಿಎಂಕೆಯಿಂದ ಒಡೆದು ಹೋಗಿರುವ ಎಎಂಎಂಕೆ ಬಣ (ಶಶಿಕಲಾ ಬೆಂಬಲಿಗರ ಬಣ)ವನ್ನು ಮರಳಿ ಎಐಡಿಎಂಕೆಯಲ್ಲಿ ವಿಲೀನಗೊಳಿಸುವ ಮೀಡಿಯೇಟರ್ ಕೆಲಸಕ್ಕೆ ರಾಷ್ಟ್ರೀಯ ಬಿಜೆಪಿ ಅದಾಗಲೇ ಇಳಿದಾಗಿದೆ. ಎಎಂಎಂಕೆ ನಡೆಸುತ್ತಿರುವ ಟಿಟಿಕೆ ದಿನಕರನ್ ಎರಡು ದಿನದ ಹಿಂದಷ್ಟೇ ದೆಹಲಿಗೆ ಹೋಗಿ ಬಂದಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾಗಿ, ಮುಂದಿನ ರಾಜಕೀಯದ ಬಗ್ಗೆ ಚರ್ಚಿಸಿದ್ದಾಗಿ ಅವರೇ ಹೇಳಿದ್ದಾರೆ.
ಮೇ 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಸತತ ಎರಡನೇ ಬಾರಿ ಅಧಿಕಾರ ನಡೆಸುತ್ತಿರುವ ಎಐಡಿಎಂಕೆ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ. ಅದೂ ಅಲ್ಲದೇ ಜಯಲಲಿತಾ ಇಲ್ಲದೇ ಅದು ಮೊದಲ ಸಲ ಚುನಾವಣೆ ಎದುರಿಸಲಿದೆ.
ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೇಳಿಕೊಳ್ಳುವ ಅಸ್ತಿತ್ವವೇ ಇಲ್ಲದ ಬಿಜೆಪಿ ಈಗ ಒಡೆದು ಹೋದ ಎಐಎಡಿಎಂಕೆಯ ಬಣವನ್ನು ಮರಳಿ ಮೂಲ ಪಕ್ಷಕ್ಕೆ ಸೇರಿಸುವ ಮಧ್ಯಸ್ಥಿಕೆ ಕೆಲಸ ಶುರು ಮಾಡಿದೆ. ಎಐಡಿಎಂಕೆ ಮತ್ತು ಬಿಜೆಪಿ ಪರಸ್ಪರ ಹೊಂದಾಣಿಕೆ ಹೊಂದಿವೆ.
ಅಂದಂತೆ ಜಯಲಲಿತಾ ಸಾವಿನ ನಂತರ ಎಐಡಿಎಂಕೆ ಹೋಳಾಗಲು ಬಿಜೆಪಿಯೇ ಕಾರಣ ಎಂಬುದನ್ನು ಜನ ಮರೆತಿರಲಾರರು. ಕಾದು ನೋಡಬೇಕು.
65 ಕೋಟಿ ರೂ. ಭ್ರಷ್ಟಾಚಾರ ಹಗರಣದಲ್ಲಿ 4 ವರ್ಷ ಜೈಲುಶಿಕ್ಷೆ ಅನುಭವಿಸಿದ ಶಶಿಕಲಾ ಶಿಕ್ಷೆಯ ಅವಧಿ ಜನವರಿಗೆ ಮುಗಿಯುತ್ತದಾದರೂ, ಸನ್ನಡತೆಯ ಆಧಾರದ ಮೇಲೆ ಈ ವಾರ ಅಥವಾ ಮುಂದಿನ ವಾರ ಅವರ ಬಿಡುಗಡೆ ಆಗಲಿದೆ ಎಂದು ಅವರ ವಕೀಲರು ಹೇಳಿದ್ದಾರೆ.
ಆಗ ಬಂದ್ರು ಸಾರ್ ಶಕುಂತಲಾ ಶುರು. ತಮಿಳರು ಶಶಿಕಲಾರಲ್ಲಿ ಜಯಲಲಿತಾರನ್ನು ಕಂಡರೆ ಪೊಲಿಟಿಕಲ್ ಪಿಚ್ಚರೇ ಬದಲಾಗಿದೆ.
ಸದ್ಯಕ್ಕೆ ಅಂತಹ ವಾತಾವರಣವಂತೂ ಇಲ್ಲ. ಈ ನಡುವೆ ವಿರೋಧ ಪಕ್ಷ ಡಿಎಂಕೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಹಿಂದಿ ಹೇರಿಕೆಯ ವಿರುದ್ಧದ ಅಲೆ ಜೋರಾಗಿಯೇ ಇದ್ದು, ಇದು ಡಿಎಂಕೆಗೆ ವರದಾನವೂ, ಬಿಜೆಪಿ ಸಖ್ಯ ಮಾಡಿದರೆ ಎಐಡಿಎಂಕೆಗೆ ಶಾಪವೂ ಆಗಬಹುದು.