-ಜಿಲ್ಲೆಯಲ್ಲಿ ಕೋವಿಡ್ ಮಾರಿ ನಿಯಂತ್ರಣಕ್ಕೆ ಯಾವುದೇ ಕೊರತೆ ಇಲ್ಲ
–ಜನರು ಸಹ ಜಾಗೃತರಾಗಿ ಟೆಸ್ಟ್ ಮಾಡಿಸಿಕೊಳ್ಳಿ, ವೈರಸ್ ಪತ್ತೆಯಾದರೆ ಚಿಕಿತ್ಸೆ ಪಡೆಯಿರಿ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನನ್ನ ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿರುವ ಬಡಜನರಿಗೆ ಪಾಸಿಟಿವ್ ಬಂದು ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಅದಕ್ಕೆ ತಗುಲುವ ಸಂಪೂರ್ಣ ವೆಚ್ಚ ಭರಿಸುತ್ತಿದ್ದು, ಅದು ನನ್ನ ವೈಯಕ್ತಿಕ ನಿರ್ಧಾರ. ಇಲ್ಲಿನ ಜನಪ್ರತಿನಿಧಿಗಳಿಗೂ ಈ ಕುರಿತು ಮನವಿ ಮಾಡುವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಸಹಾಯ ಮಾಡುವುದು ಅವರವರ ವೈಯಕ್ತಿಕ ನಿರ್ಧಾರ. ಇಲ್ಲಿನ ಜನಪ್ರತಿನಿಧಿಗಳಿಗೂ ಬಡವರ ಸಂಕಷ್ಟ ನಿವಾರಣೆಗೆ ಕೈ ಜೋಡಿಸಲು ಮನವಿ ಮಾಡುತ್ತೇನೆ ಎಂದರು.
ಕೇಸಸ್ ನಿಯಂತ್ರಣ ತಪ್ಪುತ್ತೆ ಅನ್ನೋ ಉದ್ದೇಶಕ್ಕೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈಗಾಗಲೇ ಸರಪಳಿ ಶುರುವಾಗಿದೆ. ಇದು ಕಟ್ ಆಗಲು 14-16 ದಿನಗಳು ಬೇಕು. ಕೊಪ್ಪಳ ಜಿಲ್ಲೆಯಲ್ಲೂ ಕೊರೊನಾ ಕೇಸಸ್ ಹೆಚ್ಚುತ್ತಿವೆ. ನಿತ್ಯ 350 ರಿಂದ 400 ಕೇಸಸ್ ಬರ್ತಿವೆ. ನಿನ್ನೆ ಜಿಲ್ಲೆಯಲ್ಲಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಆಕ್ಸಿಜನ್, ವೆಂಟಿಲೇಟರ್, ಬೆಡ್ ಕೊರತೆ ಆಗದಂತೆ ಇಲ್ಲಿಯವರೆಗೆ ನೋಡಿಕೊಂಡಿದೆ. ಮುಂದಿನ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮುಗಿದ ತಕ್ಷಣ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಅವುಗಳ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಗೆ ಹಾಜರಾಗುವ ಶಾಸಕರು, ಸಂಸದರು ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.
ಬೇರೆ ಬೇರೆ ಊರುಗಳಿಂದ ಬಂದಿರುವ ಗ್ರಾಮೀಣ ಭಾಗದ ಜನರನ್ನು ಇದುವರೆಗೂ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಿಡಿಓ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಭಾಗದ ಜನರ ಕೋವಿಡ್ ಟೆಸ್ಟ್ ಮಾಡಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಾಗೆನೇ ಜನರೂ ಸಹ ತಮ್ಮ ಸಂಸಾರದ ಹಿತದೃಷ್ಟಿಯಿಂದ, ಸಮಾಜದ ಹಿತದೃಷ್ಟಿಯಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ 1655 ಜನರನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಈ ಹೋಮ್ ಐಸೋಲೇಷನ್ ಶ್ರೀಮಂತರಿಗೆ ಸರಿ ಹೊಂದುತ್ತೆ. ಅವರ ಮನೆಗಳು ದೊಡ್ಡದಾಗಿರುತ್ತವೆ.
ಬಡವರಿಗೆ ಹೋಮ್ ಐಸೋಲೇಷನ್ ಸರಿ ಹೋಗಲ್ಲ. ಯಾಕೆಂದರೆ ಅವರ ಮನೆಗಳು ಬಹುತೇಕ 20*30 ಅಳತೆಯದ್ದಾಗಿರುತ್ತವೆ. ಸಣ್ಣ ಜಾಗದಲ್ಲಿ ಐಸೋಲೇಷನ್ ಮಾಡುವುದರಿಂದ ವೈರಸ್ ಮನೆಯ ಇತರರಿಗೂ ಹರಡುವ ಸಾಧ್ಯತೆ ಹೆಚ್ಚು.
ಹಾಗಾಗಿ ಕೂಡಲೇ ಕೋವಿಡ್ ಸೆಂಟರ್ ತೆರೆದು ಬಡವರನ್ನು ಐಸೋಲೇಷನ್ ಮಾಡುವ ಬದಲು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಮಾರಿ ನಿಯಂತ್ರಣದ ನಿಟ್ಟಿನಲ್ಲಿ ಅಗತ್ಯ ಸಲಕರಣೆ, ಚಿಕಿತ್ಸಾ ಸಾಮಗ್ರಿಗಳ ಕೊರತೆ ಇಲ್ಲ. ರೆಮ್‌ಡಿಸಿವರ್ ಬೇಡಿಕೆ ಇದೆ. ಈಗಾಗಲೇ ಪೂರೈಕೆ ಆಗಿದೆ. ಇನ್ನೂ ಹೆಚ್ಚುವರಿಯಾಗಿ ಬೇಕಾಗಿದ್ದು, ಸರಕಾರಕ್ಕೆ ಕೇಳುತ್ತೇವೆ. ಸದ್ಯ ಯಾವುದೇ ತೊಂದರೆ ಇಲ್ಲ.
ಕಿನ್ನಾಳದಲ್ಲಿ ನೂರಕ್ಕೂ ಹೆಚ್ಚು ಸೋಂಕಿತರು ಕಂಡು ಬಂದಿದ್ದು, ಅವರೆಲ್ಲರೂ ಕೂಲಿ ಕೆಲಸಕ್ಕೆ ಹೋಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ.ಪಾಟೀಲ, ಆ ರೀತಿ ಆಗಿರಲಿಕ್ಕಿಲ್ಲ. ಯಾಕೆಂದರೆ ಈ ಸಲ ಕೋವಿಡ್ ವೈರಸ್ ಬಗ್ಗೆ ಜನ ಬಹಳಷ್ಟು ಭೀತಿಗೊಳಗಾಗಿದ್ದಾರೆ. ಜಾಗೃತಿ ಹೊಂದಿದ್ದಾರೆ. ಹಾಗೊಂದು ವೇಳೆ ಸೋಂಕು ಕಂಡು ಬಂದರೆ ಎಲ್ಲೂ ಹೊರಗಡೆ ಓಡಾಡದೇ ಕೋವಿಡ್ ಕೇರ್ ಸೆಂಟರ್‌ಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಅವರು ಮನವಿ ಮಾಡಿದರು.
ಈ ವೇಳೆ ಸಂಸದ ಕರಡಿ ಸಂಗಣ್ಣ ಶಾಸಕ ರಾಘವೇಂದ್ರ ಹಿಟ್ನಾಳ, ಎಸ್‌ಪಿ ಟಿ.ಶ್ರೀಧರ್ ಸೇರಿದಂತೆ ಜನಪ್ರತಿನಿಧಿಗಳು, ಹಲವು ಅಧಿಕಾರಿಗಳು ಇದ್ದರು.
ಹೊರಗೆ ಬಾರದ ಡಿಸಿಗೆ ಹೇಳ್ತಿನಿ
ಎಲ್ಲಾ ಜಿಲ್ಲೆಗಳಲ್ಲೂ ಸ್ವತಃ ಜಿಲ್ಲಾಧಿಕಾರಿಗಳೇ ಹೊರಗಡೆ ಬಂದು ಕೋವಿಡ್ ನಿಯಂತ್ರಣ ಹಾಗೂ ಜಾಗೃತಿ ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೊರಗಡೆ ಬರ್ತಾ ಇಲ್ಲವಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಡೀಸಿಯವರಿಗೆ ಹೇಳ್ತಿನಿ ಎಂದು ಸಚಿವ ಬಿ.ಸಿ.ಪಾಟೀಲ ಉತ್ತರಿಸಿದರು.
ಜಿಲ್ಲಾಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಪರಿಶೀಲನೆ
ಕೊಪ್ಪಳ ಜಿಲ್ಲಾಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆ ಹೊರಗೆ ಒರಗಿಕೊಂಡಿದ್ದ ರೋಗಿಯ ಯೋಗಕ್ಷೇಮ ವಿಚಾರಿಸಿದ ಸಚಿವ ಆರೋಗ್ಯ ಸಿಬ್ಬಂದಿ ಕರೆದು ರೋಗಿಯನ್ನು ಒಳಗೆ ದಾಖಲಿಸಿಕೊಳ್ಳಲು ಸೂಚಿಸಿದರು.