ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ರಾಜ್ ದಖನಿ
`ವೈದ್ಯೋ ನಾರಾಯಣೋ ಹರಿಃ’ ಎಂದು ಕರೆಯುತ್ತಾರೆ. ವೈದ್ಯರು ನಾರಾಯಣನಾದರೆ, ಆಸ್ಪತ್ರೆ ದೇವಾಲಯವಾಗುತ್ತದೆ. ಆದರೆ, ಇದರ ತದ್ವಿರುದ್ಧವಾಗಿ ವರ್ತಿಸಿದರೆ?
ಹೌದು! ಇಲ್ಲೊಂದು ಇಂತಹ ಘಟನೆ ನಡೆದಿದೆ. ಈ ಆರೋಪದಿಂದಾಗಿ ಜನರು ಅವಳಿ ನಗರದಲ್ಲಿ ವೈದ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ.
ನಗರದ ಖ್ಯಾತ ನರರೋಗ ತಜ್ಞ ಡಾ| ಕ್ರಾಂತಿಕಿರಣ ಅವರ ಒಡೆತನದ ಬಾಲಾಜಿ ನರರೋಗ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ 52 ವರ್ಷದ ಮಹಿಳೆಯೊಬ್ಬರು ಮಿದುಳಿನ ಪಾರ್ಶ್ವವಾಯು ಚಿಕಿತ್ಸೆಗೆ ಸಂಬಂಧಿಸಿದಂತೆ ದಾಖಲಾಗಿದ್ದರು. ಕೂಡಲೇ ವೈದ್ಯರ ಸಲಹೆಯಂತೆ ಮಹಿಳೆಗೆ ಸಿಟಿ ಸ್ಕ್ಯಾನ್ ಮಾಡಲಾಗಿತ್ತು.
ಘಟನೆ ನಡೆದಿಲ್ಲ ಎಂದರು!
ಇತ್ತ ಮಹಿಳೆ ತನ್ನ ಮಗನಿಗೆ ದೂರವಾಣಿ ಕರೆ ಮಾಡಿ, ತನ್ನೊಂದಿಗೆ ನಡೆದ ವಿಚಿತ್ರ ಘಟನೆಯನ್ನು ವಿವರಿಸಿದ್ದಳು. ಗಾಬರಿಗೊಂಡ ಮಗ ಕೂಡಲೇ, ಬೆಂಗಳೂರಿನಿಂದ ಹುಬ್ಬಳ್ಳಿಯ ಅಸ್ಪತ್ರೆಗೆ ಭೇಟಿ ನೀಡಿ. ತನ್ನ ತಾಯಿಯೊಂದಿಗೆ ಮಾತನಾಡಿ ಘಟನೆಯ ವಿವರ ಪಡೆದಿದ್ದಾರೆ. ಅನಂತರ ಆಕೆಯ ಮಗ ಆಸ್ಪತ್ರೆಯ ಆಡಳಿತ ವಿಭಾಗದ ಗಮನಕ್ಕೂ ತಂದಿದ್ದಾರೆ. ಆದರೆ, ಆಸ್ಪತ್ರೆಯವರು ಆ ರೀತಿ ಯಾವ ಘಟನೆಯೂ ಇಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.
ಇಷ್ಟಕ್ಕೇ ಸುಮ್ಮನಾಗಿ ತನ್ನ ತಾಯಿಯ ಆರೈಕೆ, ಚಿಕಿತ್ಸೆಯತ್ತ ಗಮನ ಹರಿಸಲು ತಿಳಿಸಿದ್ದಾರೆ. ಆದರೆ, ಅಮ್ಮನ ಮಾತು ಸತ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ ನಿಮ್ಮ ಸಿಬ್ಬಂದಿಯನ್ನು ವಿಚಾರಿಸಿ ಎಂದು ಬೇಡಿಕೊಂಡಿದ್ದಾರೆ. ಆದರೆ, ಇದಕ್ಕೆ ಆಸ್ಪತ್ರೆಯ ಆಡಳಿತ ವಿಭಾಗ ತಲೆ ಕೆಡಿಸಿಕೊಳ್ಳದೆ, ಚಿಕಿತ್ಸೆ ಮುಂದುವರೆಸಿದ್ದಾರೆ.
ಪೊಲೀಸರಿಗೆ ಮಾಹಿತಿ, ದೂರು
ಆದರೆ, ಮಗ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾನಗರದ ಪೊಲಿಸ್ ಇನ್‌ಸ್ಪೆಕ್ಟರ್ ಮಹಾಂತೇಶ ಹೂಲಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಹೀಳಾ ರೋಗಿಯ ಮಗ ವಿದ್ಯಾನಗರದ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಷ್ಟಕ್ಕೂ ಬಾಲಾಜಿ ಆಸ್ಪತ್ರೆಯಲ್ಲಿ ಆ ರೀತಿ ನಡೆದುಕೊಂಡ ವ್ಯಕ್ತಿ ಯಾರು? ನಿಜಕ್ಕೂ ಆ ದಿನ ನಡೆದ ಸತ್ಯ ಸಂಗತಿ ಏನು? ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಅಲ್ಲದೆ, ಆರೋಪಿಯ ವಿರುದ್ಧ ಡಾ| ಕ್ರಾಂತಿ ಕಿರಣ್ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.
ಆಸ್ಪತ್ರೆಯವರು ತಲೆ ಕೆಡಿಸಿಕೊಂಡಿಲ್ಲ
ನನ್ನ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆನಂತರ ಅವರು ಹೋಂ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದಿದ್ದಾರೆ. ನಾನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಊರಿಗೆ ಬಂದಿದ್ದೆ. ಅಷ್ಟರಲ್ಲಿ ಅವರಿಗೆ ಬ್ರೇನ್ ಸ್ಟ್ರೋಕ್ ಆಯಿತು. ಕೂಡಲೇ ಅವರನ್ನು ಇಲ್ಲಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೂಗಿನಲ್ಲಿ ನಳಿಕೆ ಹಾಕಲಾಗಿತ್ತು. ಅದನ್ನು ಅವರು ಕಿತ್ತುಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ತಿಳಿಹೇಳುವಂತೆ ನನ್ನನ್ನು ಅವರಿದ್ದ ಕೋಣೆಗೆ ಕಳುಹಿಸಿದರು. ಆದ ನನ್ನ ತಾಯಿ, ನನ್ನ ಕೈ ಹಿಡಿದುಕೊಂಡು ಇಲ್ಲಿ ನನಗೆ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿದರು. ಈ ಕುರಿತು ನಾನು ಆಡಳಿತ ಮಂಡಳಿಯ ಗಮನಕ್ಕೆ ತಂದೆ. ಆದರೆ, ಅವರು ತಲೆ ಕೆಡಿಸಿಕೊಳ್ಳಲಿಲ್ಲ.
- ತೇಜ, ಆಸ್ಪತ್ರೆಗೆ ದಾಖಲಾದ ಮಹಿಳೆಯ ಪುತ್ರ