ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಅಲ್ಲೊಂದು ಭರ್ಜರಿಯಾದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿತ್ತು. ಈ ಬಸ್ ನಿಲ್ದಾಣ ಕಟ್ಟಡದ ಉದ್ಘಾಟನೆ ಯಾವಾಗ ಎಂದು ಎದುರು ನೋಡುತ್ತಿದ್ದ ಜನ ಅದಕ್ಕೊಂದು ಶುಭ ಮುಹೂರ್ತವನ್ನು ನಿಗದಿ ಮಾಡಿಯೇಬಿಟ್ಟರು. ಮಂಗಳವಾರದಂದು ಅವರೆಲ್ಲ ಎದುರುನೋಡುತ್ತಿದ್ದ ಶುಭ ಸಮಯ ಬಂದೇಬಿಟ್ಟಿತು. ಗ್ರಾಮಸ್ಥರೆಲ್ಲರೂ ಸೇರಿ ಉದ್ಘಾಟಕರನ್ನು ಬಿಗಿ ಭದ್ರತೆಯೊಂದಿಗೆ, ದೊಡ್ಡ ಸ್ವರದ ಮೈಕ್ ಸ್ವಾಗತದೊಂದಿಗೆ, ಹೂಮಾಲೆಗಳಿಂದ, ಬ್ಯಾನರ್ ಗಳಿಂದ ಸಿಂಗಾರಗೊಂಡಿದ್ದ ಬಸ್ ನಿಲ್ದಾಣದ ಬಳಿ ಕರೆತಂದು ರಿಬ್ಬನ್ ಕಟ್ ಮಾಡಿಸಿ ಉದ್ಘಾಟಿಸಲಾಯಿತು. ಪ್ರಸ್ತುತ ಲೋಕಾರ್ಪಣೆಗೊಂಡಿದ್ದು ತೆಂಗಿನ ಗರಿಗಳಿಂದ ಸಿದ್ಧಪಡಿಸಿದ್ದ ಬಸ್ ನಿಲ್ದಾಣ ಹಾಗೂ ಉದ್ಘಾಟಿಸಿದ್ದು ಯಾವುದೋ ರಾಜಕಾರಣಿ ಅಥವಾ ಜನಪ್ರತಿನಿಧಿಯಲ್ಲ. ಬದಲಾಗಿ ಉದ್ಘಾಟನೆಗೆಂದು ಆಹ್ವಾನಿಸಿದ್ದು ಒಂದು ಎಮ್ಮೆಯನ್ನು!
ನಮ್ಮದೇ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಇಂಥದೊಂದು ವಿನೂತನ ಪ್ರತಿಭಟನೆ ನಡೆದಿದೆ. ರಾಜ್ಯ ರೈತ ಸಂಘ ಆಯೋಜಿಸಿದ್ದ ಈ ವಿನೂತನ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು, ನೂರಾರು ಗ್ರಾಮಸ್ಥರು ಪಾಲ್ಗೊಂಡರು.
ಹಲವು ವರ್ಷಗಳಿಂದ ಬಾಲೆಹೊಸೂರು ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲ. ಬಸ್ ಗಾಗಿ ಕಾಯುವ ಸಂದರ್ಭದಲ್ಲಿ ಗ್ರಾಮಸ್ಥರು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಗಾಗಿ ಕಾಯುವಾಗ ಕುಳಿತುಕೊಳ್ಳಲು, ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಬಸ್ ತಂಗುದಾಣವನ್ನು ನಿರ್ಮಿಸಿಕೊಡಿ ಎಂದು ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯತಕ್ಕೆ, ತಹಶೀಲ್ದಾರರಿಗೆ ವಿನಂತಿ ಮಾಡಿ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೂ ಯಾರೂ ಕಾರ್ಯಪ್ರವೃತ್ತರಾಗಿಲ್ಲ.
ಈ ಹಿಂದೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ಗದಗ-ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿಯವರಲ್ಲೂ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಬಸ್ ತಂಗುದಾಣ ನಿರ್ಮಾಣದ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರೆಲ್ಲರೂ ಶಾಸಕ, ಸಂಸದರ ವಿರುದ್ಧ ಕಿಡಿಯಾದರು. ಇದೇ ಕಾರಣಕ್ಕೆ ಇಂದು ಈ ರೀತಿಯಲ್ಲಿ ಪ್ರತಿಭಟಿಸುತ್ತಿದ್ದೇವೆ. ಇಷ್ಟರಮೇಲೂ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಬಸ್ ತಂಗುದಾಣ ನಿರ್ಮಿಸಿಕೊಡದಿದ್ದಲ್ಲಿ ಇನ್ನೂ ಬೇರೆ ವಿಧದ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
`ಶಾಸಕ, ಸಂಸದರ ಅನುದಾನದಡಿಯಲ್ಲಿ ನಿರ್ಮಾಣವಾದ ನೂತನ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭ’, ` ಮರಣ ಹೊಂದಿದ ಶಾಸಕ-ಸಂಸದರ ಶವಯಾತ್ರೆಯಲ್ಲಿ ಸಾಗುತ್ತಿರುವ ಪಂಚಾಯತ ಸದಸ್ಯರ ಪಾದಯಾತ್ರೆ’ ಎಂದೂ ಬ್ಯಾನರ್ ಕಟ್ಟಿ ರಾಜ್ಯ ರೈತ ಸಂಘ ಹಾಗೂ ಗ್ರಾಮಸ್ಥರೆಲ್ಲರೂ ಆಕ್ರೋಶ ಹೊರಹಾಕಿದರು. ನೂರಾರು ಗ್ರಾಮಸ್ಥರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಾಲೆಹೊಸೂರಿನಲ್ಲಿ ನೂತನ ಬಸ್ ತಂಗುದಾಣ ಉದ್ಘಾಟಿಸಿದ `ಎಮ್ಮೆ!’
Advertisement