
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕುಗಳಲ್ಲಿ ಬಾಲ್ಯವಿವಾಹದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸ್ಥಳಕ್ಕೆ ತೆರಳಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಫೆ. 09 ರಂದು ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ಬಾಲಕಿಯೊಂದಿಗೆ ಗದಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಯುವಕನ ಮದುವೆ ನಿಶ್ಚಯವಾಗಿತ್ತು. ಫೆ.15 ರಂದು ಯಲಬುರ್ಗಾ ತಾಲ್ಲೂಕಿನ ಯಡ್ಡೋಣಿ ಗ್ರಾಮದಲ್ಲಿ ಯುವಕ ಹಾಗೂ ಅದೇ ಗ್ರಾಮದ ಬಾಲಕಿಯೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಫೆ.16 ರಂದು ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ಬಾಲಕಿಯೊಂದಿಗೆ ಅದೇ ಗ್ರಾಮದ ಯುವಕನ ವಿವಾಹ ನಿಶ್ಚಯವಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಗಳಂದು ರಕ್ಷಣಾ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮದುವೆ ಸಿದ್ಧತೆಗಳು ನಡೆದಿರುವುದು ಕಂಡುಬಂದಿದೆ. ನಂತರ ಬಾಲಕಿಯರ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ಬಾಲಕಿಯರಿಗೆ 18 ವರ್ಷ ಪೂರ್ಣಗೊಳ್ಳದ ಕಾರಣ ವಿವಾಹಗಳು ಬಾಲ್ಯ ವಿವಾಹವೆಂದು ಖಚಿತಗೊಂಡಿದೆ.
ಆದ್ದರಿಂದ ಬಾಲಕಿಯರ ಪೋಷಕರಿಗೆ ತಿಳುವಳಿಕೆ ನೀಡಿ ಬಾಲಕಿಯರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯಾದ ಶಿವಲೀಲಾ ವನ್ನೂರು, ಆಪ್ತ ಸಮಾಲೋಚಕರಾದ ರವಿ ಬಡಿಗೇರ, ಔಟರೀಚ್ ವರ್ಕರ್ ದೇವರಾಜ ತಿಲಗರ, ಮೇಲ್ವಿಚಾರಕಿಯರಾದ ಮಾಧವಿ ವೈದ್ಯ, ಪುಷ್ಪಾ, ಪೊಲೀಸ್ ಇಲಾಖೆಯ ಶರಣಪ್ಪ, ಮಕ್ಕಳ ಸಹಾಯವಾಣಿಯ ಶಾಂತಕುಮಾರ ಅವರ ತಂಡವು ಬಾಲಕಿಯರ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.