ಬಿಂಕದಕಟ್ಟಿ Zoo ಗೆ ಧರ್ಮ, ಅರ್ಜುನ್ ಆಗಮನ; ಮೆರಗು ಹೆಚ್ಚಿಸಿದ ಜೋಡಿ ಸಿಂಹಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕೇಂದ್ರ ಮೃಗಾಲಯ ಪ್ರಾಧಿಕಾರವು ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಜೋಡಿ ಸಿಂಹಗಳ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ 11 ವರ್ಷದ ಧರ್ಮ ಮತ್ತು ಅರ್ಜುನ ಹೆಸರಿನ ಎರಡು ಗಂಡು ಸಿಂಹಗಳು ಗದಗ ತಾಲೂಕಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ತಡರಾತ್ರಿ ಆಗಮಿಸಿವೆ.

ಸಿಂಹಗಳಿಗಾಗಿ ಪ್ರಾಣಿ ಸಂಗ್ರಹಾಲಯದಲ್ಲಿ ನೈಸರ್ಗಿಕ ಆವಾಸ ಸ್ಥಾನದ ಮಾದರಿಯಲ್ಲೇ ವಿಶೇಷ ಪಂಜರ ಸಿದ್ದಪಡಿಸಲಾಗಿದೆ. ಸಿಂಹಗಳು ಸ್ವಚ್ಛಂದವಾಗಿ ವಿಹರಿಸಲು ಅನುಕೂಲಕರವಾದ ವಾತಾವರಣ ನಿರ್ಮಿಸಲಾಗಿದೆ. ಇದಕ್ಕಾಗಿ 1,000 ಚ.ಮೀ. ಸ್ಥಳ ಮೀಸಲಿಡಲಾಗಿದೆ. ಇದರಲ್ಲಿ ಕಲ್ಲಿನ ಬಂಡೆಗಳು, ನೀರಿನ ಹೊಂಡ, ಗಿಡ-ಮರಗಳಿರುವಂತೆ ವಿನ್ಯಾಸಗೊಳಿಸಲಾಗಿದೆ.

ಸಿಂಹಗಳೆರಡು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೇ ಹುಟ್ಟಿ ಬೆಳೆದಿದ್ದರೂ ಬಯಲು ಸೀಮೆಯ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಸಿಂಹಗಳನ್ನು ೧೫-೩೦ ದಿನಗಳವರೆಗೆ ನಿಗಾದಲ್ಲಿಟ್ಟು, ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ಬಳಿಕ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು.

ಬಿಂಕದಕಟ್ಟಿ ಸಂಗ್ರಹಾಲಯದಲ್ಲಿ ಕತ್ತೆ ಕಿರುಬ ವೀಕ್ಷಿಸಲು ಗಾಜಿನ ಪರದೆಯ ವ್ಯವಸ್ಥೆ ಮಾಡಿದ್ದು, ಅದರಂತೆ ಸಿಂಹಗಳನ್ನು ವೀಕ್ಷಿಸಲು 39 ಎಂಎಂ
ಗಾಜಿನ ಪರದೆ ವ್ಯವಸ್ಥೆ ಮಾಡಲಾಗಿದೆ.
ಈ ಗಾಜುಗಳನ್ನು ಚಂಡಿಗಢದಿಂದ ತರಿಸಿಕೊಳ್ಳಲಾಗುತ್ತಿದೆ.

ಉತ್ತರ ಕರ್ನಾಟಕದಲ್ಲೇ ಬಿಂಕದಕಟ್ಟಿ ಮೃಗಾಲಯವು ಎರಡು ವರ್ಷಗಳ ಹಿಂದಷ್ಟೇ ಜೋಡಿ ಹುಲಿಗಳನ್ನು ಹೊಂದಿರುವ ಖ್ಯಾತಿ ಪಡೆದಿತ್ತು. ಇದೀಗ ಜೋಡಿ ಸಿಂಹಗಳು ಆಗಮಿಸುವ ಮೂಲಕ ಮೃಗಾಲಯದ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ.


Spread the love

LEAVE A REPLY

Please enter your comment!
Please enter your name here