ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ ಅವರ ನೇತೃತ್ವದಲ್ಲಿ ವಾರ್ಡ ನಂ.54 ರ ಮುಲ್ಲಾನ ಓಣಿ ಮುಖಂಡರಾದ ಅಬ್ದುಲ ಮುನಾಫ ಐನಾಪುರಿ ಎಂಬುವವರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮುಸ್ಲಿಂ ಜಮಾತ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಹೌದು ಮುಸ್ಲಿಂ ಸಮುದಾಯದ ಮುಖಂಡರು ಬಿಜೆಪಿ ಸೇರಿದ್ದಕ್ಕೆ ವಕ್ಪ್ ಬೋರ್ಡ್‌ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ವಿಜಯಸಾಕ್ಷಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಅವರು, ಯಾವುದೇ ಬೈಲಾದಲ್ಲಿ ಕೂಡ ಮುಸ್ಲಿಂರು ಇದೇ ಪಕ್ಷದಲ್ಲಿ ಇರಬೇಕು ಎಂಬುದು ಕಡ್ಡಾಯವಲ್ಲ. ನಾನು ಸ್ವಯಂ ಪ್ರೇರಿತವಾಗಿ ಬಿಜೆಪಿ ಸೇರಿದ್ದಕ್ಕೆ ನನಗೆ ಅಂಗಡಿ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮುಲ್ಲಾನ ಓಣಿ, ಕೌಲಪೇಟ ಸುತ್ತಮುತ್ತಲಿನ ಮುಸಲ್ಮಾನ ಮುಖಂಡರು ಹಾಗೂ ಪೂರ್ವ ಕ್ಷೇತ್ರದ ಮುಸಲ್ಮಾನ ಮುಖಂಡರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರ ಸಮ್ಮುಖದಲ್ಲಿ, ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ದಾಂತ ಮೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಮುಸ್ಲಿಂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ.