ವಿಜಯಸಾಕ್ಷಿ ಸುದ್ದಿ, ಗದಗ
ಆಡಳಿತಾರೂಢ ಬಿಜೆಪಿಯಲ್ಲಿ ಈಗ ನಾಯಕತ್ವದ ತಿಕ್ಕಾಟ ಶುರುವಾಗಿದೆ. ಈ ತಿಕ್ಕಾಟ ರಾಜ್ಯ ರಾಜಕಾರಣದಲ್ಲಿ ಅಲ್ಲ, ಗದಗ ಶಹರದಲ್ಲಿ. ಕಳೆದ ವಿಧಾನಸಭೆ ಚುನಾವಣೆಯಿಂದ ಗದಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಅನಿಲ ಮೆಣಸಿನಕಾಯಿ ಅವರದು ಒಂದು ಗ್ರೂಪ್ ಆದರೆ, ರಾಜು ಕುರಡಗಿ, ಮೋಹನ್ ಮಾಳಶೆಟ್ಟಿ ಅವರದು ಒಂದೊಂದು ಗ್ರೂಪ್. ಮನೆ ಒಂದು ಮೂರು ಬಾಗಿಲು ಅನ್ನೋಹಾಗೆ ಸದಾ ಕಾಲು ಜಗ್ಗುವ ಆಟಗಳೇ ನಡೆಯೋದು.
ಕಳೆದ ಲಾಕ್ ಡೌನ್ ಅವಧಿಯಲ್ಲಿ ಬಿಜೆಪಿಯ ಯುವ ಮುಖಂಡ ಅನಿಲ ಮೆಣಸಿನಕಾಯಿ ಭಿಕ್ಷೆ ಭೇಡಿ ಜನರಿಗೆ ಸಹಾಯ ಹಸ್ತ ಚಾಚಿದ್ದರು. ಗದಗ- ಬೆಟಗೇರಿ ಸೇರಿದಂತೆ ಹಳ್ಳಿಗಳಿಂದ ಜೋಳ, ಗೋದಿ, ಸೇರಿ ಆಹಾರ ಧಾನ್ಯಗಳನ್ನು ಭಿಕ್ಸೆ ಬೇಡಿ ನೊಂದವರಿಗೆ, ಬಡವರಿಗೆ ಹಂಚಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದರು. ಆದರೆ ಈಗ ಗದಗದತ್ತ ಅವರು ಸುಳಿದಿಲ್ಲ. ಕಾರಣ ಅವರಿಗೆ ಎರಡು ಸಲ ಕೋವಿಡ್ ಅಟ್ಯಾಕ್ ಆಗಿ ನೋವು ಅನುಭವಿಸಿ ಇನ್ನೂ ಚೇತರಿಸಿಕೊಂಡಿಲ್ಲ. ಇದರಿಂದಾಗಿ ಗದಗ ನಗರಕ್ಕೆ ಬರುವುದು ಸಾಧ್ಯವಾಗಿಲ್ಲ ಅಂತ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಈಗ ರಾಜು ಕುರಡಗಿ ಹಾಗೂ ಅವರ ಸ್ನೇಹಿತರು ಸೇರಿ ಲಾಕ್ ಡೌನ್ ನಿಂದ ನೊಂದವರಿಗೆ ಸಹಾಯ, ಆಹಾರದ ಕಿಟ್ ನೀಡುತ್ತಿದ್ದಾರೆ. ಆದರೆ ಅಸಲಿ ವಿಷಯ ಅದಲ್ಲ. ರಾಜು ಕುರಡಗಿ ತಮ್ಮ ಹಿಂಬಾಲಕರ ಮೂಲಕ ಅನಿಲ ಮೆಣಸಿನಕಾಯಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅನಿಲ್ ಸೋಂಕಿತರ ಬಗ್ಗೆ ಮಾತನಾಡುತ್ತಿಲ್ಲ. ಗದಗಕ್ಕೆ ಐದು ವರ್ಷಕ್ಕೊಮ್ಮೆ ಕ್ರಿಕೆಟ್ ಆಡಲು, ಡ್ಯಾನ್ಸ್ ಮಾಡಲು ಬರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಜತೆಗೆ ಗದಗ ಎಪಿಎಂಸಿಯ ಶಿವು ಅವರು ಜನ ಕೇಳುವ ಮೊದಲೇ ಗುರುತಿಸಿ ಸಹಾಯ ಮಾಡುತ್ತಿದ್ದಾರೆ ಎಂಬ ಸಂದೇಶವೂ ಹರಿದಾಡುತ್ತಿದೆ.
ಏನಿದೆ ಸಂದೇಶದಲ್ಲಿ?
ಸೋಶಿಯಲ್ ಮೀಡಿಯಾದಲ್ಲಿ ಅನಿಲ ಮೆಣಸಿನಕಾಯಿಗೆ ಕೋವಿಡ್ ಆಗಿತ್ತು. ಗುಣಮುಖ ಆಗಿದ್ದಾರೆ ಅದಾವ…? ಗೊತ್ತಿಲ್ಲ….. ಐದು ವರ್ಷಕ್ಕೆ ಒಂದು ಸಲ ಗದಗಗೆ ತಪ್ಪದೆ ಬರುತ್ತಾನೆ…. ಇಲ್ಲದಿದ್ದರೆ cricket ಆಡಲು ಬರುತ್ತಾನೆ…….ಬೇಜಾರ ಆದಾಗ ಬಂದು ಹೋಗಲು ಗದಗ ಒಂದು Resort ಅಲ್ಲ…..

ಇದು ಇಷ್ಟಕ್ಕೆ ಮುಗಿಯಲ್ಲ… ಮುಂದುವರೆದು…
ಇಂತ ಕರೋನಾ ಸಂಕಷ್ಟದಲ್ಲಿ ಜನ ಸೇವೆ ಎಲ್ಲಿದೆ. ರೋಗಿಗಳ ಬಗ್ಗೆ ಒಂದು ಮಾತು ಇಲ್ಲಾ…ಒಂದು ಸ್ಟೇಟ್ಮೆಂಟ್ ಇಲ್ಲಾ….ಇಂತವರ ಜನ್ಮಕ್ಕೆ ದಿಕ್ಕಾರ ಇರಲಿ…..
ಸ್ಥಳೀಯ ಪರಿಚಯ ಇರುವ ಯುವಕರನ್ನು ಬೆಂಬಲಿಸುವುದು ಬಹಳ ಉತ್ತಮ…..
Well done Sir🙏 ಅಂತ ಇದೆ.

ಕೊರೊನಾ ಸಂದರ್ಭದಲ್ಲಿಯೂ ಇಂತಹ ಹುಚ್ಚಾಟ ಬೇಕಿತ್ತಾ ಅನ್ನೋದು ಅನಿಲ ಮೆಣಸಿನಕಾಯಿ ಅವರ ಅಭಿಮಾನಿಗಳ ಮಾತು. ಮೋಹನ್ ಮಾಳಶೆಟ್ಟಿ ಅವರಿಗೂ ಅನಾರೋಗ್ಯ, ಅನಿಲ ಮೆಣಸಿನಕಾಯಿ ಅವರಿಗೂ ಅನಾರೋಗ್ಯ ಇದೆ ಅಂತೆ… ಅದನ್ನೇ ಬಂಡವಾಳ ಮಾಡಿಕೊಂಡು ಜನಸೇವೆಯ ನಾಟಕ ಆಡುತ್ತಿದ್ದಾರೆ ಅನ್ನೋ ಮಾತು ಬಿಜೆಪಿಯ ಕೆಲ ಕಾರ್ಯಕರ್ತರು ಹೇಳುತ್ತಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇರುವುದನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟವರು ಅದ್ಯಾವ ಸೀಮೆ ನಾಯಕರು ಅಂತ ಜನ ಆಡಿ ಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಕೋವಿಡ್ ಸಂದರ್ಭದಲ್ಲಿ ಇಂತಹ ಹುಚ್ಚಾಟ ಬೇಕಿರಲಿಲ್ಲ. ಇನ್ನಾದರೂ ನೊಂದವರ ಸೇವೆ ಪ್ರಾಮಾಣಿಕವಾಗಿ ಮಾಡಲಿ ಅನ್ನೋದು ನೊಂದ ಕಾರ್ಯಕರ್ತರ ಮಾತು.