ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡ್ತಿದೆ ಎಂದಿರೊ ಜಗದೀಶ್ ಶೆಟ್ಟರ್ ಬಳಿ ಸಾಕ್ಷಿ ಇದೆಯಾ? ಬಿಜೆಪಿಯವರಿಗೆ ಮೈಮೇಲೆ ಬಂದಾಗ ಸುಳ್ಳು ಹೇಳೋದೇ ಜಾಯಮಾನ ಎಂದು ವಿರೋಧಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದರು.
ಜಿಲ್ಲೆಯ ತಾವರಗೇರಾ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ವಿಚಾರದಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡ್ತಿದೆ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ಇದೆಯಾ ಎಂದು ಪ್ರಶ್ನಿಸುವ ಮೂಲಕ ಟಾಂಗ್ ನೀಡಿದರು.
ಶಾಸಕ ರಮೇಶ್ ಜಾರಕಿಹೊಳಿ ಕೋವಿಡ್ ಕಾರಣದಿಂದ ವಿಚಾರಣೆಗೆ ಗೈರಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಏನನ್ನೂ ಹೇಳಲಾರೆ ಎಂದ ಅವರು, ಸಿಡಿ ಪ್ರಕರಣದಲ್ಲಿ ಯಾರೇ ಇದ್ದರೂ ಸಮಗ್ರ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ಮಸ್ಕಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು, ಇಂದು 10-15 ಕಡೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಬೆಳಗಾವಿ ಲೋಕಸಭೆ ಹಾಗೂ ಎರಡೂ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಲ್ಲಿದ್ದರು.

