-ಹಿಟ್ನಾಳದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ರೆಡ್ ಕಾರ್ಪೆಟ್ ಸ್ವಾಗತ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರ ಬಗ್ಗೆ ಕೇಳಲ್ವಲ್ಲ ನೀವು? ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆಶಿವಕುಮಾರ್ ಮಾಧ್ಯಮದವರನ್ನು ಪ್ರಶ್ನಿಸಿದರು.
ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸದ್ಯ ಬಿಜೆಪಿಯವರು ಅದೇನೇನು ಮಾಡುತ್ತಾರೊ ಮಾಡಲಿ. ಮುಂದೆ ಬಿಜೆಪಿ ತೊರೆದು ಯಾರ್ಯಾರು ಬರುತ್ತಾರೆ ಅನ್ನೋದನ್ನ ನೋಡ್ತಾ ಇರಿ ಎಂದರು.
ಭತ್ತಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ಕಾಂಗ್ರೆಸ್ ಎಲ್ಲ ಕಡೆ ಪ್ರತಿಭಟಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡ್ತಿವಿ. ಶಿಕ್ಷಣ ವ್ಯವಸ್ಥೆ ಬಗ್ಗೆ ಸರಕಾರ ನಮ್ಮ ಸಲಹೆ ಕೇಳಿಲ್ಲ. ಸರಕಾರದ ಕ್ರಮ ನೋಡಿಕೊಂಡು ಆನಂತರ ಕಾಂಗ್ರೆಸ್ ನಿಲುವು ಪ್ರಕಟಿಸ್ತೇವೆ ಎಂದ ಡಿಕೆಶಿ,
ರೋಷನ್ ಬೇಗ್ ಬಂಧನಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಹಿಟ್ನಾಳ ಗ್ರಾಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ಅದ್ಧೂರಿ ಸ್ವಾಗತ ದೊರೆಯಿತು. ಶಾಸಕ ರಾಘವೇಂದ್ರ ಹಿಟ್ನಾಳ ನಿವಾಸದಲ್ಲಿ ಡಿಕೆಶಿ ಉಪಾಹಾರಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸಲಾಯಿತು. ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಡಿಕೆಶಿ ಮೆರವಣಿಗೆ ಮಾಡಲಾಯಿತು. ಹಿಟ್ನಾಳದಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಡಿಕೆಶಿ ನೋಡಲು ಜನರು ಮುಗಿಬಿದ್ದರು.
ಜನರತ್ತ ಕೈಬೀಸಿ ಹಿಟ್ನಾಳ ನಿವಾಸಕ್ಕೆ ಆಗಮಿಸಿದ ಡಿಕೆಶಿ ಉಪಾಹಾರ ಸೇವಿಸಿ ಸುದ್ದಿಗೋಷ್ಠಿ ನಡೆಸಿದರು. ಆನಂತರ ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕಾರಟಗಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ನಿವಾಸಕ್ಕೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದರು.