ವಿಜಯಸಾಕ್ಷಿ ಸುದ್ದಿ, ರೋಣ
ರೋಣ ಪಿಎಸ್‌ಐ ಓರ್ವ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸದೆ ಬಿಜೆಪಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವುದು ಖಂಡನೀಯ. ಈ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಡಿಎಸ್‌ಎಸ್ ಡಾ| ಬಿ.ಆರ್. ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕ ಹನುಮಂತ ಚಲವಾದಿ ಗಂಭೀರ ಆರೋಪ ಮಾಡಿದರು.
ಅವರು ಗುರುವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಿಎಸ್‌ಐ ವಿನೋದ ಪೂಜಾರಿ ಅವರ ಕಾರ್ಯವೈಖರಿ ಖಂಡನೀಯ. ಲಾಕ್‌ಡೌನ್ ಸಮಯದಲ್ಲಿ ಶ್ರೀಮಂತರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಎಲ್ಲ ರೀತಿಯ ಅನುಕೂಲವನ್ನು ಕಲ್ಪಿಸಿದ್ದಾರೆ. ಬಡವರ ಮೇಲೆ ಕೇಸ್ ಜಡಿದು ಅವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಲಾಕ್‌ಡೌನ್ ಸಮಯದಲ್ಲೂ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆದರೂ ಅತ್ತ ಕಡೆ ಹೊರಳಿ ನೋಡದ ಪಿಎಸ್‌ಐ ವಿನೋದ ಪೂಜಾರಿ, ಸಣ್ಣ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಹಫ್ತಾ ವಸೂಲಿ ಮಾಡಿದ್ದಾರೆ. ಅವರ ಮೇಲೆ ಕೇಸ್ ಕೂಡ ಹಾಕಿದ್ದಾರೆ ಎಂದು ದೂರಿದರು.
ಅಕ್ರಮ ಸಾರಾಯಿ ಮಾರಾಟ ಹಳ್ಳಿಗಳಲ್ಲಿ ಮಾತ್ರವಲ್ಲ, ರೋಣ ಪಟ್ಟಣದಲ್ಲಿ ದಿನದ 24 ಘಂಟೆಯೂ ನಡೆದಿದೆ. ಆದರೂ ಪಿಎಸ್‌ಐ ಹಳ್ಳಿಗಳಲ್ಲಿ ರೇಡ್ ಮಾಡಿದ್ದಾರೆ. ಅವರಿಂದ 10 ಸಾವಿರ ರೂ.ಗಳನ್ನು ಪಡೆದು ಕೇಸ್ ಕೂಡ ಹಾಕಿದ್ದಾರೆ. ಈ ವಿಷಯವಾಗಿ ನಮ್ಮ ಬಳಿ ದಾಖಲೆಗಳಿವೆ ಎಂದರು.
ನ್ಯಾಯಾಲಯಕ್ಕೆ ಹೋಗಲು ಸಿದ್ಧ
ಭೀಮ ಆರ್ಮಿ ಸಂಘಟನೆ ಅಧ್ಯಕ್ಷ ಮುತ್ತು ನಂದಿ ಮಾತನಾಡಿ, ಪಿಎಸ್‌ಐ ವಿನೋದ ಪೂಜಾರಿ ಅವರು ಪಕ್ಕಾ ಬಿಜೆಪಿ ಮುಖಂಡನಾಗಿರುವುದು ಲಾಕ್‌ಡೌನ್ ಸಮಯದಲ್ಲಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ಬೈಕ್ ಹಿಡಿದಾಗ ಶಾಸಕರಿಂದ ಅಥವಾ ಬಿಜೆಪಿ ಮುಖಂಡರಿಂದ ಕರೆ ಮಾಡಿಸಿದರೆ ಮಾತ್ರ ಬೈಕ್ ಬಿಟ್ಟು ಕಳಿಸುತ್ತಿದ್ದರು. ರೋಣ ಪಿಎಸ್‌ಐ ಆಕ್ರಮ ಮರಳು ಹಾಗೂ ಸಾರಾಯಿ ಮಾರಾಟಗಾರರಿಂದ ಎಷ್ಟು ಹಣ ವಸೂಲಿ ಮಾಡಿದ್ದಾರೆ ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಅನೇಕ ಬಡವರು ನೊಂದಿರುವ ಕಾರಣ ನ್ಯಾಯಾಲಯಕ್ಕೆ ಹೋಗಲೂ ಸಿದ್ಧ ಎಂದರು.
ಸುರೇಶ ಬೇವಿನಕಟ್ಟಿ, ಭೀಮಸಿ ಮಹಾರಾಜನವರ, ರಿಯಾಜ್ ಬೆಳವಣಕಿ, ಚಂದ್ರು ಜಕನೂರ, ಚಂದ್ರು ಹಡಗಲಿ ಉಪಸ್ಥಿತರಿದ್ದರು.
ಪ್ರತಿಭಟನೆ ಮಾಡುತ್ತೇವೆ
ಬೆಳವಣಕಿ, ಮಲ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಆಗುತ್ತಿದ್ದರೂ ಹಫ್ತಾ ವಸೂಲಿ ಮಾಡಿ ಸುಮ್ಮನಿರುವ ಪಿಎಸ್‌ಐ, ಬಡವರ ಹಾಗೂ ದಲಿತರ ಮೇಲೆ ತನ್ನ ಹಗೆಯನ್ನು ಸಾಧಿಸುತ್ತಿರುವುದು ತರವಲ್ಲ. ಹಿರಿಯ ಅಧಿಕಾರಿಗಳು ಪಿಎಸ್‌ಐ ಮೇಲೆ ಕ್ರಮ ತೆಗೆದುಕೊಳ್ಳದಿದ್ದರೆ ಲಾಕ್‌ಡೌನ್ ಮುಗಿದ ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
- ಮುತ್ತು ನಂದಿ, ಅಧ್ಯಕ್ಷರು, ಭೀಮ ಆರ್ಮಿ ಸಂಘಟನೆ